ಹೊಸದೊಂದು ವಿಚಿತ್ರ ಕೀಟ ಬಂದಿದೆ. ಈ ಕೀಟ ಕಚ್ಚಿದ್ರೆ ಕೆಲವೇ ಕ್ಷಣಗಳಲ್ಲಿ ಸಾವು ಖಚಿತ ಇಂತದೊಂದು ವಾಟ್ಸಪ್ ಸಂದೇಶ ಕಲಬುರಗಿ ಜಿಲ್ಲೆಯ ರೈತರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇದರಿಂದಾಗಿ ರೈತರು ಮತ್ತು ಕೃಷಿ ಕಾರ್ಮಿಕರು ಹೊಲಕ್ಕೆ ಹೋಗಲು ಭಯ ಪಡುವಂತಾಗಿದೆ.
ಈ ವಾಟ್ಸಪ್ ಸಂದೇಶವು ಕಲಬುರಗಿ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಚಿಂಚೋಳಿ ತಾಲೂಕಿನ ಹಲವೆಡೆ ಭಾರಿ ವೈರಲ್ ಆಗಿದ್ದು, ಒಂದು ವಿಚಿತ್ರವಾದ ಕೀಟದ ಫೋಟೋ ಮತ್ತು ಹೊಲದಲ್ಲಿ ಇಬ್ಬರು ವ್ಯಕ್ತಿ ಸತ್ತು ಬಿದ್ದಿರುವ ಫೋಟೋ.. ಹಾಗೆ ಈ ಕೀಟ ಕಚ್ಚಿದ್ರೆ ಕ್ಷಣದಲ್ಲೇ ಸತ್ತು ಹೋಗ್ತಿರಿ ಹುಷಾರ್ ಎನ್ನುವ ಆಡಿಯೋ ಸಂದೇಶ ಒಳಗೊಂಡ ಮಾಹಿತಿ ರೈತರನ್ನು ನಿದ್ದೆಗೆಡುವಂತೆ ಮಾಡಿದೆ.
ಈ ಸಂದೇಶ ದಿನದಿಂದ ದಿನಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಮಳೆ ಆಗಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಆದ್ರೆ ಈ ಕೀಟದ ಭಯದಿಂದ ಕೆಲವೆಡೆ ರೈತರು ಮತ್ತು ಕೃಷಿ ಕಾರ್ಮಿಕರು ಹೊಲಕ್ಕೆ ಹೋಗಲು ಭಯ ಪಡುತ್ತಿದ್ದಾರೆ.
ಕೃಷಿ ಇಲಾಖೆ ಸ್ಪಷ್ಟೀಕರಣ ನೀಡಿದೆ:
ಈ ವಿಚಿತ್ರ ಕೀಟ ಕಚ್ಚಿ ರೈತರಿಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯೇ ಸುಳ್ಳು. ಇದು ಕೇವಲ ವದಂತಿ. ಯಾವ ರೈತರೂ ಭಯ ಪಡಬೇಕಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್ ರೈತರಿಗೆ ಅಭಯ ನೀಡಿದ್ದಾರೆ.
ಇಲ್ಲಿ ವೈರಲ್ ಆಗಿರುವ ಕೀಟದ ಹೆಸರು ಸೆರ್ಸಾ ಲ್ಯಾಪಿಡಾ (Cersa Lapida). ಈ ಹುಳು ಕಡಿತದಿಂದ ಮನುಷ್ಯ ಸಾವನಪ್ಪುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸ್ಪಷ್ಟನೆ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ವಾಟ್ಸ್ಯಾಪ್ ಗ್ರೂಪ್‍ನಲ್ಲಿ ಸೆರ್ಸಾ ಲ್ಯಾಪಿಡಾ (Cersa Lapida) ಹುಳು ಕಡಿದರೆ ಮನುಷ್ಯ ಕ್ಷಣಾರ್ಧದಲ್ಲಿ ಸಾವನ್ನಪ್ಪುತ್ತಾನೆ ಎಂಬ ಧ್ವನಿ ಸಂದೇಶದ ಜೊತೆಗೆ ಸದರಿ ಹುಳುವಿನ ಫೋಟೋ ಹರಿದಾಡುತ್ತಿದ್ದು, ಇದು ಶುದ್ಧ ಸುಳ್ಳಿನ ಸಂದೇಶವಾಗಿದೆ. ಈ ಹುಳು ಕಡಿತದಿಂದ ಮನುಷ್ಯ ಸಾವನ್ನಪ್ಪುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಹುಳುವಿನ ವೈಜ್ಞಾನಿಕ ಹೆಸರು ಸೆರ್ಸಾ ಲ್ಯಾಪಿಡಾ
ಈ ಹುಳುವಿನ ವೈಜ್ಞಾನಿಕ ಹೆಸರು ಸೆರ್ಸಾ ಲ್ಯಾಪಿಡಾ (Cersa Lapida) . ಇದು ಕೇವಲ ಒಂದು ಎಲೆ ತಿನ್ನುವ ಕೀಟ ಅಷ್ಟೇ, ಸರ್ವೇ ಸಾಮಾನ್ಯವಾಗಿ ಔಡಲ ಹಾಗೂ ಸೂರ್ಯಕಾಂತಿ ಬೆಳೆಗಳಲ್ಲಿ ಬಹಳ ವಿರಳವಾಗಿ ಕಂಡುಬರುತ್ತದೆ. ಇನ್ನು ಈ ಹುಳು ಎಲೆ ತಿಂದಾಗ ಹಸಿರು ಬಣ್ಣದಾಗಿರುತ್ತದೆ, ಹೂ ತಿಂದಾಗ ಹಳದಿ ಬಣ್ಣಕ್ಕೆ ಹಾಗೂ ಕಾಯಿ ತಿಂದಾಗ ಕಪ್ಪು ಬಣ್ಣಕ್ಕೆ ಸಹಜವಾಗಿ ತಿರುಗುತ್ತದೆ ಎಂಬಿತ್ಯಾದಿ ಸತ್ಯಕ್ಕೆ ದೂರವಾದ ತಪ್ಪು ಮಾಹಿತಿಯು ವಾಟ್ಸಾಪ್ ಗ್ರೂಪ್‍ನಲ್ಲಿ ಹರಿದಾಡುತ್ತಿದೆ.