ವೀಕ್ಷಕವಾಣಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ಯುವ ಘಟಕವು ಜು.09 ರಂದು ಮಲಪ್ಪುರಂ ದೇವಸ್ಥಾನದಲ್ಲಿ ಹಿಂದೂ ವಿವಾಹವನ್ನು ನೆರವೇರಿಸಿತು. ವಿಷ್ಣು ಮತ್ತು ಗೀತಾ ವಿವಾಹವು ವೆಂಗರ ಶ್ರೀ ಅಮ್ಮಂಚೇರಿ ಭಗವತಿ ದೇವಸ್ಥಾನದಲ್ಲಿ ನಡೆಯಿತು.

ಪಾಲಕ್ಕಾಡ್ ಮೂಲದ ವೆಂಗರಾದ ಮನಟ್ಟಿಪರಂಬುವಿನ ರೋಸ್ ಮ್ಯಾನರ್ ಶಾರ್ಟ್ ಸ್ಟೇ ಹೋಮ್ ನಿವಾಸಿ ಗೀತಾ ಹಾಗೂ ವಿಷ್ಣು ಎಂಬವರ ವಿವಾಹವನ್ನು ವೆಂಗರ ಮಂಟಪದ ಮುಸ್ಲಿಂ ಲೀಗ್ ಕಾರ್ಯಕರ್ತರು ಆಯೋಜಿಸಿದ್ದರು. ಸ್ಟೇ ಹೋಂನ ಅಧೀಕ್ಷಕರು ವಿವಾಹವನ್ನು ನಿಶ್ಚಯಿಸಿದರೆ, ಐಯುಎಂಎಲ್ ನ ಯುವ ವಿಭಾಗವು ಹಣಕಾಸಿನ ನೆರವು ನೀಡಿತು. ಅಮ್ಮಂಚೇರಿ ಭಗವತಿ ದೇವಸ್ಥಾನದ ಅಂಗಳದಲ್ಲಿ ‘ಮಂಟಪ’ವನ್ನು ಸ್ಥಾಪಿಸಲಾಯಿತು.
ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಸೈಯದ್ ಸಾದಿಕ್ ಅಲಿ ಶಿಹಾಬ್ ತಂಙಳ್, ಹಿರಿಯ ಮುಖಂಡ ಹಾಗೂ ಶಾಸಕ ಪಿ.ಕೆ.ಕುನ್ಹಾಲಿಕುಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವದಂಪತಿಯನ್ನು ಆಶೀರ್ವದಿಸಿದರು. ಸಮಾರಂಭದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಮತ್ತು ಕಾಂಗ್ರೆಸ್ ನ ಹಲವಾರು ನಾಯಕರು ಉಪಸ್ಥಿತರಿದ್ದರು.
ಪಿ.ಕೆ.ಕುನ್ಹಾಲಿಕುಟ್ಟಿ ಈ ಬಗ್ಗೆ ಫೇಸ್ ಬುಕ್ ನಲ್ಲಿ “ಇಂದು ದೇವಾಲಯದ ಅಂಗಳವು ನನ್ನ ನೆಲದ ಏಕತೆ ಮತ್ತು ಸ್ನೇಹಕ್ಕೆ ಸಾಕ್ಷಿಯಾಗುವ ಸುಂದರ ಚಿತ್ರಗಳಿಗೆ ಸಾಕ್ಷಿಯಾಗಿದೆ. ಇದು ಅನುಕರಿಸಲು ಉತ್ತಮ ಸಂದೇಶವಾಗಿದೆ. ವೈವಾಹಿಕ ಜೀವನದಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ವಿಷ್ಣು ಮತ್ತು ಗೀತಾ ಅವರಿಗೆ ಶುಭ ಹಾರೈಕೆಗಳು” ಎಂದು ಬರೆದುಕೊಂಡಿದ್ದಾರೆ.