ಬೆಳಗಾವಿ: ಇನ್ಸ್ಟಾಗ್ರಾಮ್ನಲ್ಲಿ ನಡೆದ ಕಿತ್ತಾಟ ಕೊನೆಗೆ ಬಾಲಕನ ಹತ್ಯೆಯಲ್ಲಿ ಕೊನೆಯಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಹುಡುಗಿ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಪ್ರಜ್ವಲ್(17) ಎಂಬ ಹುಡುಗನಿಗೆ ಮೆಸೇಜ್ ಮಾಡಲಾಗಿದೆ. ಮೆಸೇಜ್ ಮಾಡುತ್ತಿರುವುದು ಹುಡುಗ ಎಂದು ಗೊತ್ತಾಗುತ್ತಿದ್ದಂತೆಯೇ ಮೆಸೇಜ್ನಲ್ಲಿ ಅವಾಚ್ಯವಾಗಿ ಬೈದಿದ್ದಾನೆ. ಇದರಿಂದ ಕೆರಳಿದ ಮೆಸೇಜ್ ಮಾಡುತಿದ್ದವರು ಗ್ಯಾಂಗ್ ಕಟ್ಟಿಕೊಂಡು ಬಂದು ಪ್ರಜ್ವಲ್ ಜತೆಗೆ ಜಗಳವನ್ನು ಮಾಡಿದ್ದಾರೆ. ಈ ಗಲಾಟೆಯು ವಿಕೋಪಕ್ಕೆ ತಿರುಗಿ ಅಂತಿಮವಾಗಿ ಪ್ರಜ್ವಲ್‌ನನ್ನು ಹತ್ಯೆ ಮಾಡಿದ್ದಾರೆ.
ಸೆಪ್ಟೆಂಬರ್ 26ರಂದು ಸಂಜೆ ಹುಡುಗರ ಗ್ಯಾಂಗ್ ಪ್ರಜ್ವಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಜ್ವಲ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ಕು ಬಾಲಾಪರಾಧಿಗಳು ಸೇರಿ ವಿಶಾಲ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.