ಇಸ್ರೇಲ್: ಸೋಮವಾರದಂದು ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆ ಹಾಕುವಂತೆ ಸೇನೆಗೆ ಇಸ್ರೇಲ್ ಆದೇಶವನ್ನು ನೀಡಿದೆ.
ನಾವು ಗಾಜಾವನ್ನು ಸಂಪೂರ್ಣ ಸೀಜ್ ಮಾಡಿದ್ದೇವೆ. ಅಲ್ಲಿ ವಿದ್ಯುತ್, ಆಹಾರ ಮತ್ತು ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಗೃಹ ಅಥವಾ ವಾಣಿಜ್ಯ ಬಳಕೆ ಅನಿಲ ಪೂರೈಕೆ ಇರುವುದಿಲ್ಲ, ಎಲ್ಲವನ್ನೂ ನಿಲ್ಲಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಮೂರು ದಿನಗಳ ಸಂಘರ್ಷದ ನಂತರ ಈ ದಿಗ್ಬಂಧನ ಆದೇಶವನ್ನು ಹೊರಡಿಸಲಾಗಿದ್ದು ಎರಡೂ ಕಡೆಗಳಲ್ಲಿ 1,100 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
48 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆಯ ಬಳಿಕ ಇಸ್ರೇಲ್‌ನ ಸೇನೆಯು ಸೋಮವಾರ ಗಾಜಾದ ಸುತ್ತಲೂ ಇರುವ ಎಲ್ಲ ಪ್ರದೇಶಗಳ ಉಗ್ರರನ್ನು ಹಿಮ್ಮೆಟ್ಟಿಸಿ ನಿಯಂತ್ರಣವನ್ನು ಹಿಂಪಡೆದಿದೆ ಎಂದು ಹೇಳಿದೆ.