ಬೆಂಗಳೂರು: ಭಾರತೀಯ ಜನತಾ ಪಾರ್ಟಿ ಸಾರಥ್ಯದಲ್ಲಿನ ನ್ಯಾಶನಲ್ ಡೆಮೊಕ್ರಟಿಕ್ ಅಲಯನ್ಸ್ ಜತೆ ಕೈ ಜೋಡಿಸಲು ಜಾತ್ಯಾತೀತ ಜನತಾದಳ ಸಿದ್ಧವಾಗಿದೆ. ಬಿಜೆಪಿ ನೇತೃತ್ವದ ಎನ್.ಡಿ.ಎ. ಮತ್ತು ಕಾಂಗ್ರೆಸ್ ಮುಂದಾಳತ್ವದ ಯುಪಿಎ ಒಕ್ಕೂಟಕ್ಕೆ ದೇಶದಲ್ಲಿ ಪರ್ಯಾಯವಾಗಿ ತೃತೀಯ ರಂಗ ಅಸ್ತಿತ್ವಕ್ಕೆ ಬರಬೇಕು ಎಂದು ಧ್ವನಿ ಮೊಳಗಿದ್ದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರ ಜೆಡಿಎಸ್ ಪಕ್ಷದ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿತ್ತು. ಆದರೆ, ತೃತೀಯ ರಂಗದ ಕನಸು ಭಗ್ನವಾಗುತ್ತಿದೆ. ಇದೀಗ ಕಾಂಗ್ರೆಸ್ ಪಕ್ಷದ ಮುಂದಾಳತ್ವದಲ್ಲಿ ವಿಪಕ್ಷಗಳನ್ನು ಒಗ್ಗೂಡಿಸುವ ಕಾರ್ಯ ನಡೆಯುತ್ತಿದೆ. ಹತ್ತಾರು ಪ್ರಮುಖ ಪಕ್ಷಗಳು ಸೇರಿ ಎನ್.ಡಿ.ಎ.ಗೆ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್ ಕೊಡಲು ಚಿಂತನ ಮಂಥನ ನಡೆಸುತ್ತಿದೆ.
ಯುಪಿಎಗೆ ಟಾಂಗ್ ನೀಡಲು ತಯಾರಿ ನಡೆಸುತ್ತಿರುವ ಬಿಜೆಪಿ ಕೂಡ ಇತರ ಪಕ್ಷಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯೋಜನೆ ರೂಪಿಸಿದೆ. ಇದರ ಮಹತ್ವದ ಭಾಗವಾಗಿ ಜೆಡಿಎಸ್ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಬಿಜೆಪಿ ಗಾಳ ಹಾಕಿದೆ. ಜೆಡಿಎಸ್ ಪಕ್ಷವನ್ನು ಎನ್.ಡಿ.ಎ. ಒಕ್ಕೂಟಕ್ಕೆ ಸೇರ್ಪಡೆ ಮಾಡುವುದು ಬಿಜೆಪಿಯ ರಾಜಕೀಯ ಲೆಕ್ಕಾಚಾರವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡರೆ ಗೆಲುವು ಸುಲಭ ಆಗಬಹುದು ಎಂಬ ಕಾರಣಕ್ಕಾಗಿ ಮೈತ್ರಿ ವಿಚಾರ ಮುನ್ನಲೆಗೆ ಬಂದಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನದ ನಾಯಕ ಸ್ಥಾನವನ್ನು ಎಚ್.ಡಿ.ಕುಮಾರಸ್ವಾಮಿಯವರಿಗೆ ಬಿಟ್ಟು ಕೊಡಲು ತೆರೆಯ ಮರೆಯಲ್ಲಿ ಚಟುವಟಿಕೆ ನಡೆಯುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.