ರಘುಪತಿ ಭಟ್ ಮನೆಗೆ ಭೇಟಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್
ಭಟ್ರು ಪಕ್ಷದ ವಿರುದ್ಧ, ಪಕ್ಷ ಬಿಟ್ಟು ತೆಗೆದುಕೊಳ್ಳುವ ತೀರ್ಮಾನಕ್ಕೆ ನನ್ನ ಬೆಂಬಲವಿಲ್ಲ ಎಂದ ಸುನಿಲ್ ಕುಮಾರ್
ದುಡುಕಿನ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೇನೆ
ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದ ಕಾರಣ ಅಸಮಾಧಾನಗೊಂಡ ಮಾಜಿ ಶಾಸಕ ಕೆ. ರಘುಪತಿ ಭಟ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಸಹಿತ ಪಕ್ಷದ ನಾಯಕರಿಂದ ಮನವೊಲಿಸುವ ಕಾರ್ಯ ಮುಂದುವರಿದಿದೆ.
ಈ ಮಧ್ಯೆ ರಘುಪತಿ ಭಟ್ ಮನೆಗೆ ಭೇಟಿ ನೀಡಿದ ಶಾಸಕರು ಆಗಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಅವರು, ಭಟ್ರ ಮನವೊಲಿಸುವ ಕಾರ್ಯ ಮಾಡಿದರು. ಆದರೆ, ಅವರ ಮಾತಿಗೂ ಬಗ್ಗದ ಭಟ್ರು ತನ್ನ ನಿರ್ಧಾರ ಅಚಲ, ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕುಮಾರ್ ಅವರು, ರಘುಪತಿ ಭಟ್ ಅವರು ಪಕ್ಷದ ವಿರುದ್ಧ, ಪಕ್ಷ ಬಿಟ್ಟು ತೆಗೆದುಕೊಳ್ಳುವ ತೀರ್ಮಾನಕ್ಕೆ ನನ್ನ ಬೆಂಬಲವಿಲ್ಲ. ಪರಿಷತ್ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಭಾವನೆಯನ್ನು ರಘುಪತಿ ಭಟ್ ವ್ಯಕ್ತಪಡಿಸಿದ್ದಾರೆ. ದುಡುಕಿನ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೇನೆ ಎಂದರು.
ಈ ಹಿಂದೆ ಹಲವು ಬಾರಿ ಫೋನ್ ನಲ್ಲಿ ಸಂಪರ್ಕ ಮಾಡಿದ್ದೆ ಇಂದು ಮುಖತಃ ಭೇಟಿಯಾಗಿದ್ದೇನೆ. ಭಟ್ ಹಲವಾರು ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಎಲ್ಲಾ ಭಾವನೆಯ ಜೊತೆ ಗೆಳೆಯನಾಗಿ ನಾನಿದ್ದೇನೆ. ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ವಿರುದ್ಧ ಅವರು ನಿರ್ಧಾರ ತೆಗೆದುಕೊಂಡಿರಲಿಲ್ಲ. ಪಕ್ಷದ ಗೆಲುವಿಗೆ ಕಾರ್ಯಕರ್ತನಾಗಿ ಕೆಲಸ ಮಾಡಿದ್ದರು. ಪರಿಷತ್ ಚುನಾವಣೆಯಲ್ಲೂ ಪಕ್ಷದ ಪರ ಕೆಲಸ ಮಾಡಬೇಕು ಎಂದು ವಿನಂತಿಸಿದ್ದೇನೆ. ದುಡುಕಿನ ನಿರ್ಧಾರ ಒಳ್ಳೆಯದಲ್ಲ ಎಂದು ಮನವೊಲಿಸಲು ಯತ್ನಿಸಿದ್ದೇನೆ ಎಂದು ಹೇಳಿದರು.
ನನ್ನ ಮಾತನ್ನು ಒಪ್ಪಿ ನಿರ್ಧಾರ ಬದಲಿಸುತ್ತಾರೆ ಎಂಬ ವಿಶ್ವಾಸ ಇಲ್ಲ. ಮಾತುಕತೆಯಾದ ಬಗ್ಗೆ ವರಿಷ್ಠರಿಗೆ, ರಾಜ್ಯಾಧ್ಯಕ್ಷರಿಗೆ ಮಾಹಿತಿ ನೀಡುತ್ತೇನೆ. ಮನವೊಲಿಸುವ, ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಟಿಕೆಟ್ ಹಂಚಿಕೆ ಜೆಡಿಎಸ್ ಜೊತೆ ಮೈತ್ರಿಯಿಂದ ಸಹಜವಾಗಿ ಕರಾವಳಿಗೆ ಸಮಸ್ಯೆಯಾಗಿದೆ. ಪಕ್ಷದ ನಿರ್ಧಾರದಿಂದ ಕೆಲ ಅನಿವಾರ್ಯ ತೀರ್ಮಾನಗಳು ಆಗಬೇಕಾಗುತ್ತದೆ. ಪಕ್ಷ ಒಂದು ಬಾರಿ ತೀರ್ಮಾನ ಕೈಗೊಂಡ ಮೇಲೆ ಚರ್ಚೆ ಮಾಡಲು ಸಾಧ್ಯವಿಲ್ಲ. ಅಭ್ಯರ್ಥಿಯ ಗೆಲುವಿಗೆ ಬೇಕಾದ ಸಹಕಾರ ಮಾಡುತ್ತೇವೆ ಎಂದರು.
ರಘುಪತಿ ಭಟ್ ಅವರಿಗೆ ಇನ್ನು ಎರಡು ಮೂರು ದಿನ ಅವಕಾಶ ಇದೆ. ರಾಜ್ಯನಾಯಕರ ಜೊತೆ ಮಾತಾಡಿ ಎರಡನೇ ಸುತ್ತಿನ ಮಾತುಕತೆ ಕೂಡ ನಡೆಯುತ್ತದೆ. ನಮ್ಮ ಪಕ್ಷದಲ್ಲಿ ಮಾತುಕತೆ ಮೂಲಕವೇ ಎಲ್ಲ ವ್ಯವಸ್ಥೆ ಸರಿ ಮಾಡುತ್ತೇವೆ ಎಂದು ತಿಳಿಸಿದರು.