ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್. ವಿ.ಭಟ್ ವಿಧಿವಶ

Share with



ಕನ್ನಡ ಸಾಹಿತ್ಯ ಪರಿಷತ್ ನ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿದ್ದ ಕಾಸರಗೋಡು ಬೀರಂತ ಬೈಲು ನಿವಾಸಿ ಎಸ್ ಪಿ ಭಟ್ ಎಂದು ಪರಿಚಯತರಾಗಿರುವ ಸುಬ್ರಹ್ಮಣ್ಯ ವೆಂಕಟರಮಣ ಭಟ್(73) ಭಾನುವಾರ ಮಧ್ಯಾಹ್ನ ತೀವ್ರ ಹೃದಯಘಾತ ಸಂಭವಿಸಿ ನಿಧನ ಹೊಂದಿದ್ದಾರೆ.

ಬದಿಯಡ್ಕದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಬಳಿಕ ಕುಸಿದು ಬಿದ್ದ ಅವರನ್ನು ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಗಡಿನಾಡಿನ ಕನ್ನಡಪರ ಹೋರಾಟಗಾರರಲ್ಲಿ ಮುಂಚೂಣಿಯಾಗಿದ್ದ ಎಸ್ ವಿ ಭಟ್ ಅವರು ಸತತ ನಾಲ್ಕು ಬಾರಿ ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿ ಕನ್ನಡದ ಚಟುವಟಿಕೆಯಲ್ಲಿ ಸಕ್ರಿಯ ರಾಗಿದ್ದರು. ಉತ್ತಮ ಸಂಘಟನಾ ಚತುರರು ಆಗಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಾಲಕೂಡ ಗ್ರಾಮದ ನಿವಾಸಿಯಾದ ಅವರು 1975ರಲ್ಲಿ ಕಾಸರಗೋಡಿಗೆ ಆಗಮಿಸಿದ್ದರು.

ಧಾರವಾಡ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಕುಮಟದಲ್ಲಿ ಬಿಇಡಿ ಶಿಕ್ಷಣ ಪೂರೈಸಿದವರು ಕಾಸರಗೋಡಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಂತರ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಬಳಿಕ ತಮ್ಮ ಸಂಪೂರ್ಣ ಕಾಲಾವಧಿಯನ್ನು ಕನ್ನಡವರ ಚಟುವಟಿಕೆಗಳಿಗೆ ಮೀಸಲಿರಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕದ ವತಿಯಿಂದ ಹಲವಾರು ಯಶಸ್ವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಟ್ಟಿದ್ದರು. ಪಠ್ಯಪುಸ್ತಕ, ಆಧಾರ ಗ್ರಂಥ, ಸಹಾಯ ಕೈಪಿಡಿ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಸಾಪ ಗಡಿನಾಡ ಘಟಕ ಅಧ್ಯಕ್ಷ , ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪದಾಧಿಕಾರಿ, ಕಾಸರಗೋಡು ಹವ್ಯಕ ಸಭಾ ಪದಾಧಿಕಾರಿ ಸೇರಿದಂತೆ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದರು.

ಶಿಸ್ತಿನ ಸಿಪಾಯಿಯಾಗಿದ್ದ ಅವರು ಮುಖ್ಯ ಶಿಕ್ಷಕರಾಗಿ ಶಿಕ್ಷಣಾಧಿಕಾರಿಯಾಗಿ ಶೈಕ್ಷಣಿಕ ವಲಯದಲ್ಲಿ ಹಲವಾರು ಸುಧಾರಣೆಗಳಿಗೆ ಕಾರಣಕರ್ತರಾಗಿದ್ದರು.
ಯಕ್ಷಗಾನ ಪ್ರಿಯರಾಗಿದ್ದ ಅವರು, ಯಕ್ಷಗಾನ ಹವ್ಯಾಸಿ ವೇಷಧಾರಿ, ಅರ್ಥಧಾರಿಯೂ ಆಗಿ ಗಮನ ಸೆಳೆದಿದ್ದರು.

ಅವರು ಪತ್ನಿಯಾದ ನಿವೃತ್ತ ಅಂಚೆ ಇಲಾಖೆ ಅಧಿಕಾರಿ ತಾರ, ಪುತ್ರ ಡಾಕ್ಟರ್ ಮರಳಿದರ ಹಾಗೂ ಪುತ್ರಿ ಇಂಜಿನಿಯರ್ ವೀಣಾ ಅವರನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *