
ಕಾಸರಗೋಡು: ಕೇರಳದ ರಾಜ್ಯ ರಸ್ತೆಗಳಲ್ಲಿ ಎಐ ಕ್ಯಾಮೆರಾ ಅಳವಡಿಸಿರುವದರಿಂದ ಹೆಲ್ಮೆಟ್ ಧರಿಸದ ಬೈಕ್ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಬೈಕ್ ಪ್ರಯಾಣ ವೇಳೆ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಹೆಲ್ಮೆಟ್‌ಧಾರಿಗಳಾಗಿದ್ದಾರೆ. ಹೆಲ್ಮೆಟ್ ಮಾರಾಟ ಕೇಂದ್ರಗಳಲ್ಲೂ ವ್ಯಾಪಾರ ಹೆಚ್ಚಿದೆ. ಆದರೆ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಗುಣಮಟ್ಟವಿಲ್ಲದ ಹೆಲ್ಮೆಟ್ ಖರೀದಿಸುವವರೂ ಇದ್ದಾರೆ.
ದ್ವಿಚಕ್ರ ವಾಹನಗಳ ಮುಂಬದಿ, ಹಿಂಬದಿ ಸವಾರರು ಕಡ್ಡಾಯವಾಗಿ ಐಎಸ್‌ಐ ಮುದ್ರೆ ಇರುವ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಕಡ್ಡಾಯವಾಗಿ ಹೆಲ್ಮೆಟ್‌ನ ಕ್ಲಿಪ್ ಹಾಕಿಕೊಳ್ಳಬೇಕು. ಕ್ಯಾಮೆರಾ ಭಯದಲ್ಲಿ ಹೆಲ್ಮೆಟ್ ಧರಿಸುವುದು ಅಪಾಯಕಾರಿ ಎಂದು ಮೋಟಾರು ವಾಹನ ಅಧಿಕಾರಿಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಆಗಾಗ ಹೇಳುತ್ತಿದ್ದಾರೆ.
ಕ್ಯಾಮೆರಾದಲ್ಲಿ ನಿಯಮ ಉಲ್ಲಂಘನೆ ಸೆರೆ
ಎಐ ಕ್ಯಾಮೆರಾಗಳು ಪತ್ತೆಹಚ್ಚಿದ ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಹೆಲ್ಮೆಟ್ ಬಳಸದ ದ್ವಿಚಕ್ರ ವಾಹನ ಪ್ರಯಾಣವೇ ಹೆಚ್ಚಿದೆ. ಕಾರು ಚಾಲಕ ಹಾಗೂ ಮುಂಬದಿ ಸೀಟ್‌ನಲ್ಲಿ ಕುಳಿತವರು ಸೀಟ್ ಬೆಲ್ಟ್ ಹಾಕದೇ ಇದ್ದರೆ ಕ್ಯಾಮರಾ ಕಣ್ಣಿಗೆ ಬಿದ್ದೇ ಬೀಳುತ್ತೀರಿ. ನಿಯಮ ಉಲ್ಲಂಘಿಸಿದಲ್ಲಿ ಸ್ವಲ್ಪವೇ ದಿನದಲ್ಲಿ ಮನೆ ಬಾಗಿಲಿಗೆ ದಂಡ ಕಟ್ಟಲು ನೋಟೀಸ್ ಬರುತ್ತದೆ. ಅದರಲ್ಲೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸದ ಕಾರಣ ಮಾಲೀಕರು ದಂಡ ಪಾವತಿಸಿದ ಪ್ರಕರಣಗಳು ಹೆಚ್ಚಿವೆ. ಇದರೊಂದಿಗೆ ಬೈಕ್, ಸ್ಕೂಟರ್‌ನಲ್ಲಿ ಪ್ರಯಾಣಿಸುವವರು ಲಿಫ್ಟ್ ಕೊಡುವುದನ್ನು ನಿಲ್ಲಿಸಿದ್ದಾರೆ. ಹೆಲ್ಮೆಟ್‌ನ ಕ್ಲಿಪ್ ಅಳವಡಿಸದೆ ಪ್ರಯಾಣಿಸಿದರೂ ದಂಡ ನೀಡಬೇಕಾಗುವುದು. ಹಿಂಬದಿ ಸವಾರ ಹೆಲ್ಮೆಟ್ ಬದಲಿಗೆ ಟೋಪಿ ಧರಿಸಿದ್ದರೂ ಎಐ ಕ್ಯಾಮೆರಾ ನಿಯಮ ಉಲ್ಲಂಘನೆ ಸೆರೆ ಹಿಡಿಯುವುದು. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೆ 500 ರೂ., ಬೈಕ್‌ನ ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ 500 ರೂ. ದಂಡ ಕಟ್ಟಬೇಕಾಗುವುದು. ಒಂದಕ್ಕಿಂತ ಹೆಚ್ಚು ಕ್ಯಾಮೆರಾದಲ್ಲಿ ನಿಯಮ ಉಲ್ಲಂಘನೆ ಸೆರೆಯಾದರೆ ಪ್ರತ್ಯೇಕ ದಂಡ ಪಾವತಿಸಬೇಕಾಗುವುದು.