
ಮಂಗಳೂರು: ದಸರಾ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿಯಿಂದ ಕರಾವಳಿ ಭಾಗದಲ್ಲಿ ದಸರಾ ದೇವಸ್ಥಾನ ದರ್ಶನ 4 ವಿಶೇಷ ಪ್ಯಾಕೇಜ್ ಟೂರ್‌ಗಳನ್ನು ಆರಂಭಿಸಲಾಗುತ್ತಿದ್ದು, ಈ ಪ್ಯಾಕೇಜ್‌ಗಳಿಗೆ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ಪ್ರವಾಸಕ್ಕೆ ನಮ್ಮ ನಗರ ಹಾಗೂ ನಗರ ವೋಲ್ವೊ ಸಾರಿಗೆ ಬಸ್ ವಿಶೇಷ ಟೂರ್ ಪ್ಯಾಕೇಜ್ ಹಮ್ಮಿಕೊಂಡಿದೆ. ಅಕ್ಟೋಬರ್ 15 ರಿಂದ 24 ರ ತನಕ ನಾಲ್ಕು ಪ್ಯಾಕೇಜ್ ಗಳು ಲಭ್ಯವಿದ್ದು, ಮೊದಲ ದಿನದಿಂದಲೇ 25 ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜನರು ಮುಂಗಡ ಬುಕ್ ಮಾಡಿದರೆ ಜನರ ಬೇಡಿಕೆಗೆ ತಕ್ಕಂತೆ ಇನ್ನು ಹೆಚ್ಚಿನ ಬಸ್ ಒದಗಿಸಲಾಗುತ್ತದೆ. ಮಂಗಳೂರು ದಸರಾ ದರ್ಶನ, ಮಂಗಳೂರು- ಮಡಿಕೇರಿ, ಮಂಗಳೂರು- ಕೊಲ್ಲೂರು, ಪಂಚದುರ್ಗಾ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. www.ksrtc.in ನಲ್ಲಿ ಮುಂಗಡ ಆಸನವನ್ನು ಕಾಯ್ದಿರಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ಯಾಕೇಜ್ ಗಳ ವಿವರ ಈ ಕೇಳಗಿನಂತಿವೆ.
ಪ್ಯಾಕೇಜ್ 1: ಮಂಗಳೂರು ಬಸ್ ನಿಲ್ದಾಣ, ಶ್ರೀ ಮಂಗಳಾದೇವಿ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಹಾಗೂ ಬೀಚ್, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ- ನವದುರ್ಗಾ ದರ್ಶನದ ಅವಕಾಶವಿದೆ. ಈ ಪ್ಯಾಕೇಜ್ ಪ್ರವಾಸಕ್ಕೆ ನಮ್ಮ ನಗರ ಬಸ್‌ನಲ್ಲಿ ಪ್ರತಿ ಪ್ರಯಾಣಿಕರಿಗೆ 400 ರೂಪಾಯಿ (ಊಟ, ಉಪಾಹಾರ ಹೊರತುಪಡಿಸಿ), 6 ರಿಂದ 12 ವರ್ಷವರೆಗಿನ ಮಕ್ಕಳಿಗೆ ತಲಾ 300 ರೂಪಾಯಿ ನಿಗದಿ ಪಡಿಸಲಾಗಿದೆ. ಇದೇ ಪ್ಯಾಕೇಜ್‌ನ ನಗರ ವೋಲ್ವೊ ಬಸ್‌ನಲ್ಲಿ ವಯಸ್ಕರಿಗೆ 500 ರೂಪಾಯಿ ಮತ್ತು ಮಕ್ಕಳಿಗೆ 400 ರೂಪಾಯಿ ನಿಗದಿ ಪಡಿಸಲಾಗಿದೆ.
ಪ್ಯಾಕೇಜ್ 2: ಮಡಿಕೇರಿ ರಾಜಾಸೀಟ್, ಅಬ್ಬಿ ಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಮ್ ಪ್ರವಾಸವಿದ್ದು, ಕರ್ನಾಟಕ ಸಾರಿಗೆ ಬಸ್‌ನಲ್ಲಿ ವಯಸ್ಕರಿಗೆ 500 ರೂಪಾಯಿ ಮತ್ತು ಮಕ್ಕಳಿಗೆ 400 ರೂಪಾಯಿ ನಿಗದಿಪಡಿಸಲಾಗಿದೆ.
ಪ್ಯಾಕೇಜ್ 3: ಮಂಗಳೂರು ಬಸ್ ನಿಲ್ದಾಣದಿಂದ ಮಾರಣಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನವಾಗಿ ವಾಪಸ್ ಮಂಗಳೂರು ಬಸ್ ನಿಲ್ದಾಣಕ್ಕೆ ಅವಕಾಶ ಮಾಡಲಾಗಿದೆ. ಕರ್ನಾಟಕ ಸಾರಿಗೆ ಬಸ್‌ಗೆ ವಯಸ್ಕರಿಗೆ 500 ರೂಪಾಯಿ ಮತ್ತು ಮಕ್ಕಳಿಗೆ 400 ರೂಪಾಯಿ ನಿಗದಿಪಡಿಸಲಾಗಿದೆ.
ಪ್ಯಾಕೇಜ್ 4: ಪಂಚದುರ್ಗಾ ದರ್ಶನವಿದ್ದು ಮಂಗಳೂರು ಬಸ್ ನಿಲ್ದಾಣದಿಂದ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ವಾಪಸ್ ಮಂಗಳೂರು ಬಸ್ ನಿಲ್ದಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ನಮ್ಮ ನಗರ ಸಾರಿಗೆ ಬಸ್‌ನಲ್ಲಿ ವಯಸ್ಕರಿಗೆ 400 ರೂಪಾಯಿ ಮತ್ತು ಮಕ್ಕಳಿಗೆ 300 ರೂಪಾಯಿ ನಿಗದಿಪಡಿಸಲಾಗಿದೆ.