ಮಂಗಳೂರು: ‘ಮೋಕ್ಷಾ ಕ್ರಿಯೇಷನ್ಸ್’ ಬ್ಯಾನರ್ ನಲ್ಲಿ ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿರುವ ಕರಾವಳಿ ಭಾಗದ ಕಥಾ ಹಂದರ ಹೊಂದಿರುವ ‘ಕುದ್ರು’ ಅ.13ರಂದು ಕರ್ನಾಟಕಾದ್ಯಂತ ಬಿಡುಗಡೆಯಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಾಯಕ ನಟ ಹರ್ಷಿತ್ ಶೆಟ್ಟಿ ಹೇಳಿದರು.
ಕುದ್ರು ಎಂದರೆ ನೀರಿನಿಂದ ಸುತ್ತುವರಿದ ದ್ವೀಪವಾಗಿದ್ದು ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಮೂರು ಕುಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವಾಗ ಒಮ್ಮೆ ವಾಟ್ಸಪ್ ನಲ್ಲಿ ಬಂದ ಸಂದೇಶದಿಂದ ಎಲ್ಲರಲ್ಲೂ ಮನಸ್ತಾಪ ಉಂಟಾಗುತ್ತದೆ. ಚಿತ್ರದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕುತೂಹಲ ಮೂಡಿಸುವ ಕಥಾ ಹಂದರವಿದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಉಡುಪಿ, ಮಲೆನಾಡು, ಗೋವಾ ಹಾಗೂ ಆಯಿಲ್ ರಿಗ್ ನಲ್ಲಿ ಚಿತ್ರೀಕರಣ ನಡೆದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನಪ್ರಿಯವಾಗಿದೆ ಎಂದು ತಿಳಿಸಿದರು.
ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯಾಗಿ ನಟಿ ಡೈನಾ ಡಿ’ಸೋಜಾ, ಮುಸ್ಲಿಂ ಹುಡುಗನಾಗಿ ನಟ ಫರ್ಹಾನ್, ಮಂಗಳೂರಿನ ನಮಿತಾ, ಪ್ರವೀಣ್ ಬಂಗೇರ, ಕಾಂತಾರ ಸತೀಶ್ ಆಚಾರ್ಯ, ಬ್ರಾಹ್ಮಣ ಹುಡುಗನಾಗಿ ಹರ್ಷಿತ್ ಶೆಟ್ಟಿ, ಕ್ರಿಶ್ಚಿಯನ್ ಹುಡುಗನಾಗಿ ಗಾಡ್ವಿನ್ ಹಾಗೂ ಬ್ರಾಹ್ಮಣ ಹುಡುಗಿ ಪಾತ್ರದಲ್ಲಿ ನಾಯಕಿ ಪ್ರಿಯಾ ಹೆಗ್ಡೆ ನಟಿಸಿದ್ದಾರೆ. ಛಾಯಾಗ್ರಹಣ ಶ್ರೀ ಪುರಾಣಿಕ್, ಪ್ರದೀಪ್ ಮತ್ತು ಉಡುಪಿ ಪ್ರಜ್ವಲ್, ಪ್ರತೀಕ್ ಕುಂದು ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ಕುಲಾಲ್ ಅವರ ಸಂಕಲನವಿರುವ ‘ಕುದ್ರು’ ಚಿತ್ರಕ್ಕೆ ಉಡುಪಿ ಕೃಷ್ಣ ಆಚಾರ್ ಸಂಭಾಷಣೆ ಬರೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹರ್ಷಿತ್ ಶೆಟ್ಟಿ, ಪ್ರಿಯಾ ಹೆಗ್ಡೆ, ಸತೀಶ್ ಆಚಾರ್ಯ, ಫರ್ಹಾನ್, ನಮಿತಾ, ಡಯಾನಾ ಡಿ’ಸೋಜಾ, ಪ್ರವೀಣ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.