ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಹೆಸರಿನ ಆನೆ ಶಿವರಾತ್ರಿಯಂದೇ ಮೃತಪಟ್ಟಿದೆ. 60 ವರ್ಷ ಪ್ರಾಯದ ಲತಾ ಕಳೆದ 50 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯಲ್ಲಿ ನಿರತವಾಗಿತ್ತು. ಸುದ್ಧಿ ಮೂಲಗಳ ಪ್ರಕಾರ ಮಾ.8ರಂದು ಮಧ್ಯಾಹ್ನದ ವೇಳೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಕಳೆದ 50 ವರ್ಷಗಳಿಂದ ಧರ್ಮಸ್ಥಳದ ಜಾತ್ರಾ ಮಹೋತ್ಸವದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ ಎಲ್ಲರ ಚಿತ್ತ ಸೆಳೆಯುತ್ತಿದ್ದಳು.

ಧರ್ಮಸ್ಥಳದಲ್ಲಿ ಲಕ್ಷ್ಮಿ ಶಿವಾನಿ ಎಂಬ ಎರಡು ಆನೆಗಳಿವೆ. ಶಿವಾನಿಗೆ ಅಜ್ಜಿಯಂತೆ, ಲಕ್ಷ್ಮೀಗೆ ಲತಾ ಆನೆಯು ತಾಯಿಯಾಗಿ ಪ್ರೀತಿಯಿಂದ ವರ್ತಿಸುತ್ತಿತ್ತು. ಶಿವಾನಿಗೆ ಲಕ್ಷ್ಮಿ ಸ್ವಂತ ತಾಯಿಯಾದರೂ, ಲತಾ ಆನೆಯೊಂದಿಗೆ ಹೆಚ್ಚು ಸಲುಗೆಯನ್ನು ಹೊಂದಿತ್ತು.
ಲತಾ ಆನೆಯನ್ನು ಕಳೆದುಕೊಂಡಿರುವ ಶಿವಾನಿ ಹಾಗೂ ಲಕ್ಷ್ಮಿ ಇಬ್ಬರು ಮಂಕಾಗಿದ್ದಾರೆ. ಲತಾ ಆನೆಯ ಅಂತ್ಯ ಸಂಸ್ಕಾರ ಮಾ.8ರಂದು ಸಂಜೆ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ ಬಳಿ ಆಗಮಿಸುತ್ತಿದ್ದಾರೆ.