ಕಾಂಗ್ರೆಸ್ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಅರಾಜಕತೆ ಸೃಷ್ಟಿ: ಕಿಶೋರ್ ಕುಮಾರ್

Share with

ಉಡುಪಿ: ಕಾಂಗ್ರೆಸ್ ಆಡಳಿತ ವ್ಯವಸ್ಥೆಯಲ್ಲಿ ವೈಫಲ್ಯ ಕಂಡ ಪರಿಣಾಮವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಅರಾಜಕತೆ ಸೃಷ್ಟಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆರೋಪಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿಗಳಿಗೆ ಹಾಗೂ ಜಾಹೀರಾತುಗಳಿಗೆ ರಾಜ್ಯದ ಜನತೆಯ ತೆರಿಗೆ ಹಣ ಪೋಲಾಗುತ್ತಿದೆ. ಇದರಿಂದ ಸರಕಾರ ಬೊಕ್ಕಸ ಬರಿದಾಗಿದೆ. ಬರಪರಿಹಾರ ಕಾರ್ಯದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. 875ಕ್ಕೂ ಹೆಚ್ಚು ರೈತರು ಅತ್ಮಹತ್ಯೆ ಮಾಡಿಕೊಂಡಿದ್ದು, ಜನರು ಗುಳೆ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ವಿಧಾನಸೌಧದ ಆವರಣದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೆ ಜ್ವಲoತ ಸಾಕ್ಷಿ. ಇವೆಲ್ಲವೂ ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದ ಫಲ. ನಾಸಿರ್ ರಾಜ್ಯಸಭೆಗೆ ಆಯ್ಕೆಯಾದ ಕ್ಷಣವೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿದ್ದು ಅತ್ಯಂತ ಕೆಟ್ಟ ಬೆಳವಣಿಗೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಯ ಒಂದು ಭಾಗ ಕೂಡ ಕಾಂಗ್ರೆಸ್ ತನ್ನ ಎಪ್ಪತ್ತು ವರ್ಷಗಳ ಆಡಳಿತದಲ್ಲಿ ಮಾಡಿಲ್ಲ.ಕಿಸಾನ್ ಸಮ್ಮಾನ್ ಯೋಜನೆಯಡಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು 6 ಸಾವಿರ ನೀಡುತ್ತಿದೆ. ನಮ್ಮ ರಾಜ್ಯದಲ್ಲಿ ಅಂದಿನ ಯಡಿಯೂರಪ್ಪ ಅವರ ಸರಕಾರ ಆರಂಭಿಸಿದ್ದ ಹೆಚ್ಚುವರಿ 4 ಸಾವಿರ ನೀಡುವ ವ್ಯವಸ್ಥೆಯನ್ನು ರಾಜ್ಯ ಕಾಂಗ್ರೆಸ್ ಸರಕಾರ ನಿಲ್ಲಿಸಿದೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ವಕ್ತಾರರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ, ವಿಜಯಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *