ಉಡುಪಿ: ಅಕ್ಟೋಬರ್ 15ರಂದು ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಮಹಿಷ ದಸರಾ ಹಾಗೂ ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಕೋಟ್ಯಾನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಅವರು “ಬಹುಜನರ ಭಾಗ್ಯವಿಧಾತ, ಬೌದ್ಧರ ನೈಜ ಇತಿಹಾಸವನ್ನು, ಮಹಿಷ ಪರಂಪರೆಯನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಮತ್ತು ವೈದಕ ಸಂಸ್ಕೃತಿಗೆ ಪರ್ಯಾಯವಾಗಿ ಪ್ರತಿಸಂಸ್ಕೃತಿ ಸೃಷ್ಟಿಸುವ ಸಲುವಾಗಿ ಅಂಬೇಡ್ಕರ್ ಯುವ ಸೇನೆ ಆಯೋಜಿಸಿರುವ ಮಹಿಷ ದಸರಾ ಸಾರ್ವಕಾಲಿಕ ಮಹತ್ವ ಹೊಂದಲಿದೆ” ಎಂದು ತಿಳಿಸಿದರು.
“ಅ.15ರಂದು ಬೆಳಗ್ಗೆ 10:30ಕ್ಕೆ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದಿಂದ ವಿವಿಧ ವಾಹನಗಳ ಜಾಥಾದೊಂದಿಗೆ ಮಹಿಷ ರಾಜನ ಟ್ಯಾಬ್ಲೊ ಮೆರವಣಿಗೆ ಹೊರಟು ಜೋಡುಮಾರ್ಗವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಉಡುಪಿಯ ಅಂಬೇಡ್ಕರ್‌ಭವನದವರೆಗೆ ಜಾಥಾ ನಡೆಸಲಾಗುತ್ತದೆ. ಬಳಿಕ ‘ಮಹಿಷಾಸುರ ಯಾರು’ ಎಂಬ ವಿಚಾರ ಸಂಕಿರಣವನ್ನು ಕಲಬುರಗಿಯ ಸಂಶೋಧಕ ಡಾ|ವಿಠಲ ವಗ್ಗನ್ ಅವರು ಉದ್ಘಾಟಿಸಿ ವಿಚಾರ ಮಂಡನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಚಿಂತಕ ನಾರಾಯಣ ಮಣೂರು ಹಾಗೂ ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮವು ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಯುವ ಸೇನೆಯ ದಯಾನಂದ ಕಪ್ಪಟ್ಟು, ಲೋಕೇಶ್ ಪಡುಬಿದ್ರಿ, ಸಂಜೀವ ಬಳ್ಳೂರು, ಗಣೇಶ ನೆರ್ಗಿ ಉಪಸ್ಥಿತರಿದ್ದರು.