ಮಂಗಳೂರು: ನಕಲಿ ದಾಖಲೆ ಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ಅಕ್ರಮವಾಗಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರದ ಬಜ್ಜೋಡಿ ಬಿರ್ಕನಕಟ್ಟೆ ನಿವಾಸಿ ಬರ್ನಾಡ್ ರೋಶನ್ ಮೆಸ್ಕರೆನಸ್ (41) ಬಂಧಿತ ವ್ಯಕ್ತಿಯಾಗಿದ್ದು, ಈತ ಮಂಗಳೂರು ನಗರದ ಕಂಕನಾಡಿ-ಪಂಪ್ವೆಲ್ನ ಹಳೆ ರಸ್ತೆಯಲ್ಲಿರುವ ವಿಶ್ವಾಸ್ ಕ್ರೌನ್ ಅಪಾರ್ಟ್ಮೆಂಟ್ನ ನೆಲ ಅಂತಸ್ತಿನಲ್ಲಿರುವ ಕೊಠಡಿಯೊಂದರಲ್ಲಿ ‘ಹೆಲ್ಪ್ ಲೈನ್ ಮಂಗಳೂರು’ ಎಂಬ ಹೆಸರಿನ ಸಂಸ್ಥೆಯನ್ನು ಇಟ್ಟುಕೊಂಡಿದ್ದು, ಇಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಅಂಕ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ಇತ್ಯಾದಿಗಳ ತಯಾರಿಸಿ ಸಾರ್ವಜನಿಕರಿಗೆ ಅಕ್ರಮವಾಗಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ.
ಇತರೆ ದಾಖಲಾತಿಗಳನ್ನು ಮಾಡಿಕೊಟ್ಟು ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿದ್ದ. ಈ ಬಗ್ಗೆ ಮಾಹಿತಿ ದೊರಕಿದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ರೋಶನ್ ಮೆಸ್ಕರೆನಸ್ನನ್ನು ಬಂಧಿಸಿದ್ದಾರೆ. ಈತ ವಿವಿಧ ಹೆಸರಿನಲ್ಲಿ ತಯಾರಿಸಿದ ನಕಲಿ ಆಧಾರ್ ಕಾರ್ಡ್ಗಳು, ನಕಲಿ ರೇಷನ್ ಕಾರ್ಡ್, ನಕಲಿ ಉದ್ದಿಮೆ ಪರವಾನಗಿ ಪತ್ರ, ನಕಲಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ನಕಲಿ ಜನನ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.