ಮಂಗಳೂರು: ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ-2 ನ್ಯಾಯಾಲಯವು ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷಗಳ ಕಠಿನ ಶಿಕ್ಷೆ ವಿಧಿಸಿ ತೀರ್ಪನ್ನು ನೀಡಿದೆ.
ಹಾವೇರಿ ಜಿಲ್ಲೆಯ ನೆಲೋಗಲ್ ಗ್ರಾಮದ ಬೆನಕರಾಜ್ ಲಮಾಣಿ ಆಲಿಯಾಸ್ ರಾಜ್(25) ಶಿಕ್ಷೆಗೊಳಗಾದ ಆರೋಪಿಯಾಗಿದ್ದು, ಬಾಲಕಿಯ ಅಜ್ಜ ಅನಾರೋಗ್ಯದಿಂದ ಬಳಾಲುತ್ತಿದ್ದು ಅವರನ್ನು ನೋಡಿಕೊಳ್ಳಲು ಆರೋಪಿಯನ್ನು ಹೋಮ್‌ನರ್ಸ್ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. 2022ರ ಜನವರಿಯಲ್ಲಿ ಒಂದು ದಿನ ಬಾಲಕಿಯ ತಾಯಿ ಔಷಧ ತರಲೆಂದು ಮನೆಯಿಂದ ಹೊರಗೆ ಹೋಗಿದ್ದಾಗ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದು ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ಇನ್ಸ್‌ಪೆಕ್ಟರ್ ಎಸ್.ಎಚ್ ಭಜಂತ್ರಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ತೀರ್ಪು ನೀಡಿದ್ದಾರೆ. ಆರೋಪಿಯ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಕಲಂ 376 ಮತ್ತು ಪೊಕ್ಸೋ ಕಲಂ 6ರ ಅಡಿಯಲ್ಲಿ 20 ವರ್ಷ ಕಠಿನ ಸಜೆ ಮತ್ತು 25,000 ರೂಪಾಯಿ ದಂಡ, ಐಪಿಸಿ ಕಲಂ 323ರಡಿಯಲ್ಲಿ 6 ತಿಂಗಳ ಸಾದಾ ಸಜೆ ಮತ್ತು 1,000 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ. ಅಭಿಯೋಜನಾ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.