ಉಡುಪಿ: ಗಾಂಜಾ ನಶೆಯಲ್ಲಿದ್ದ ಯುವಕರಿಬ್ಬರು ನಡೆದುಕೊಂಡು ಹೋಗುತ್ತಿದ್ದ ಈರ್ವರಿಗೆ ಚಾಕುವನಿಂದ ಇರಿದ ಘಟನೆ ಕಳೆದ ರಾತ್ರಿ ಉದ್ಯಾವರ ಜೈಹಿಂದ್ ಜಂಕ್ಷನ್ ಬಳಿ ನಡೆದಿದೆ. ಉದ್ಯಾವರ ಕಡವಿನ ಬಾಗಿಲಿನ ಜಯರಾಮ್ ಮತ್ತು ಸಂದೀಪ್ ಫರ್ನಾಂಡೀಸ್ ರಾತ್ರಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹೆಡ್ ಲೈಟ್ ಹಾಕದೆ ಬೈಕ್ ಚಲಾಯಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಬೈಕ್ ಸವಾರರು ಕುರ್ಕಾಲ್ ನಿವಾಸಿಗಳಾದ ಪ್ರೇಮನಾಥ್ (23 ವ) ಹಾಗೂ ಸಂಪತ್(24 ವ) ತಮ್ಮ ಕೈಯಲ್ಲಿದ್ದ ಕತ್ತರಿಯಲ್ಲಿ ಇರಿದಿದ್ದಾರೆ. ಇವರು ಗಾಂಜಾ ನಶೆಯಲ್ಲಿದ್ದರು ಎನ್ನಲಾಗಿದೆ.
ಇರಿತದಿಂದ ಜಯರಾಮ್ ಮತ್ತು ಸಂದೀಪ್ ಕುಸಿದು ಬಿದ್ದಿದ್ದು, ಈ ಸಂದರ್ಭ ಗಾಂಜಾ ನಶೆಯಲ್ಲಿದ್ದ ಇಬ್ಬರು ಯುವಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಇಬ್ಬರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಮಾಹಿತಿ ತಿಳಿದ ಕಾಪು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.