ಮಂಗಳೂರು: ಹಿರಿಯ ಸಾಹಿತಿ, ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ ಕೆ.ಟಿ.ಗಟ್ಟಿ (ಕೂಡ್ಲು ತಿಮ್ಮಪ್ಪ ಗಟ್ಟಿ) ಅವರು ಫೆ.19ರಂದು ನಿಧನರಾಗಿದ್ದಾರೆ.
ಕೇರಳದ ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದ ಕೆ.ಟಿ.ಗಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ ನೆಲೆಸಿದ್ದರು. ತಮ್ಮ ಹದಿನೇಳರ ವಯಸ್ಸಿನಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಇವರು 25 ವರ್ಷ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕೆ.ಟಿ.ಗಟ್ಟಿ ಅವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಗಳಿಸಿದ್ದರು.
ಕೆ.ಟಿ.ಗಟ್ಟಿ ಅವರ ಮೊದಲ ಕಾದಂಬರಿ ‘ಶಬ್ದಗಳು’ 1973ರಲ್ಲಿ ಪ್ರಕಟವಾಯಿತು. ಈವರೆಗೆ 48 ಕಾದಂಬರಿಗಳು 5 ಕಥಾಸಂಕಲನಗಳು, 6 ಪ್ರಬಂಧ ಸಂಕಲನಗಳು, 22 ನಾಟಕಗಳು, 14 ಬಾನುಲಿ ನಾಟಕಗಳು, 2 ಕವನ ಸಂಕಲನಗಳಲ್ಲದೆ ಆತ್ಮಕಥೆ, ವ್ಯಕ್ತಿಚಿತ್ರ, ಮಕ್ಕಳ ನಾಟಕ ಹಾಗೂ ಪ್ರವಾಸ ಕಥನಗಳನ್ನು ಬರೆದ ಹೆಗ್ಗಳಿಕೆ ಇವರದು. ಇವರು ಬರೆದ ಹಲವಾರು ಕಾದಂಬರಿಗಳು, ಬರಹಗಳು ಹೆಸರಾಂತ ದಿನಪತ್ರಿಕೆಗಳು, ವಾರ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇವರು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರೆ.