ಈದ್ ಮಿಲಾದ್ ಹಬ್ಬಕ್ಕೆ ಮಂಗಳೂರಿನ ಮೀನು ದಕ್ಕೆಗೆ ಕಡ್ಡಾಯ ರಜೆ: ಬ್ಯಾನರ್ ವಿವಾದ

Share with

ಹಸಿ ಮೀನು ವ್ಯಾಪಾರಸ್ಥರ ಸಂಘದ ಬ್ಯಾನರ್ ಅಳವಡಿಕೆ.

ಮಂಗಳೂರು: ಈದ್ ಮಿಲಾದ್ ಹಬ್ಬದ ದಿನವಾದ ಸೆ.28ರಂದು ಮೀನುಗಾರರು ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ಹಸಿ ಮೀನು ವ್ಯಾಪಾರಸ್ಥರ ಸಂಘವು ಬ್ಯಾನರ್ ಅಳವಡಿಸಿದ್ದು, ಇದರ ವಿರುದ್ಧ ಆಕ್ಷೇಪಗಳು ವ್ಯಕ್ತವಾಗಿತ್ತು.

ಬ್ಯಾನರ್ ಅಳವಡಿಕೆಯ ಹಿಂದಿನ ಉದ್ದೇಶವನ್ನು ಹಸಿ ಮೀನು ವ್ಯಾಪಾರಸ್ಥರ ಸಂಘವು ಸ್ಪಷ್ಟಪಡಿಸಿದ್ದು, ಮೀನುಗಾರಿಕಾ ದಕ್ಕೆಯಲ್ಲಿ ಅಳವಡಿಸಿರುವ ಬ್ಯಾನರ್‌ನಲ್ಲಿ “ವ್ಯಾಪಾರಸ್ಥರ ಸಂಘದ ನಿರ್ಧಾರದಂತೆ ಸೆ.28ರಂದು ಮುಂಜಾನೆ 3:45ರ ನಂತರ ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕು. ರಜೆ ಮಾಡದೇ ಕಾನೂನು ಉಲ್ಲಂಘಿಸಿದರೆ, ದಕ್ಕೆಯಲ್ಲಿ ಒಂದು ತಿಂಗಳು ವ್ಯಾಪಾರ ಮಾಡದಂತೆ ಸಂಘವು ಕ್ರಮ ಕೈಗೊಳ್ಳುತ್ತದೆ ಮತ್ತು ದಂಡನೆ ವಿಧಿಸುತ್ತದೆ” ಬರೆಯಲಾಗಿದೆ.

ಬ್ಯಾನರ್ ಅಳವಡಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ಮೀನುಗಾರರ ಸಂಘವು “ಹಸಿ ಮೀನು ವ್ಯಾಪಾರಸ್ಥರ ಸಂಘದಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ. ಮಂಗಳೂರು ದಕ್ಕೆಯಲ್ಲಿ ವರ್ಷದಲ್ಲಿ ಒಟ್ಟು 9 ದಿನ ರಜೆಯಿರುತ್ತದೆ. ಅದರಲ್ಲಿ, ಹಿಂದುಗಳ ಹಬ್ಬಕ್ಕೆ 4 ದಿನ, ಮುಸ್ಲಿಮರ ಹಬ್ಬಕ್ಕೆ 3 ದಿನ, ಕ್ರೈಸ್ತರ ಹಬ್ಬಕ್ಕೆ 2 ದಿನದಂತೆ ರಜೆಯನ್ನು ಹಂಚಲಾಗಿದೆ. ಮೊನ್ನೆ ಚೌತಿಯ (ಗಣೇಶ ಹಬ್ಬ) ದಿನ ರಜೆ ಇತ್ತು. ಆದರೆ ಪರ್ಸಿನ್ ಬೋಟ್‌ಗಳು ನಿಯಮವನ್ನು ಮೀರಿ ವ್ಯಾಪಾರವನ್ನು ಮುಂದುವರೆಸಿದ್ದರು. ಹೀಗಾಗಿ, ರಜೆಯ ದಿನ ರಜೆಯನ್ನು ತೆಗೆದುಕೊಳ್ಳಲೇಬೇಕೆಂದು ಬ್ಯಾನರ್ ಅಳವಡಿಸಬೇಕಾಯಿತು” ಎಂದು ಹೇಳಿದೆ.

ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘ, ಪರ್ಶಿಯನ್ ಬೋಟ್ ಯೂನಿಯನ್, ಟ್ರಾಲ್ ಬೋಟ್ ಯೂನಿಯನ್, ಫಿಶ್ ಬಯ್ಯರ್ಸ್ ಎಸೋಸಿಯೇಶನ್ ಮತ್ತಿತರ ಸಂಘಗಳು ಸಂಯುಕ್ತವಾಗಿ ಈ ರಜೆಗಳನ್ನು ನಿರ್ಧರಿಸಲಾಗಿದೆ.

ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಘದ ಮಿಲಾದ್ ರಜೆಯ ಪ್ರಕಟನಾ ಫಲಕ ಬಗ್ಗೆ ಕೆಲವರು ತಪ್ಪು ಗ್ರಹಿಕೆಯ ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿರುವುದು ಖೇದಕರವಾಗಿದ್ದು, ಇಂತಹ ತಪ್ಪು ಮಾಹಿತಿ ಗಳಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದಾಗಿ ವಿನಂತಿಸಲಾಗಿದೆ.


Share with

Leave a Reply

Your email address will not be published. Required fields are marked *