ಇಂಫಾಲ್: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೊಬ್ಬ ಆರೋಪಿಯನ್ನು ಬಂಧನ ಮಾಡಲಾಗಿದೆ. ಇದೀಗ ಪ್ರಕರಣದಲ್ಲಿ ಒಟ್ಟು 5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹಲವು ಆರೋಪಿಗಳನ್ನು ಬಂಧನ ಮಾಡಲು ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಚರಣೆಯ ಬಗ್ಗೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಖುದ್ದಾಗಿ ಗಮನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ತೌಬಲ್ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನತೆ ಉಂಟಾಗಿದ್ದು, ಜಿಲ್ಲೆಯ ಹಲವು ಕಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವರದಿ ಹೇಳಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಹುಯಿರೆಮ್ ಹೆರೋದಾಸ್ ಮೈತೆ ಸೇರಿದಂತೆ ನಾಲ್ವರನ್ನು ಜು.21 ರಂಧು ಬಂಧಿಸಲಾಗಿತ್ತು. ಆರೋಪಿ ಹೆರೋದಾಸ್ ಮನೆಗೆ ನಿನ್ನೆ ಪೆಚ್ಚಿ ಗ್ರಾಮದ ಮಹಿಳೆಯರು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಪೊಲೀಸ್ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 126 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ. ಇನ್ನೂ ಚೆಕ್‌ಪೋಸ್ಟ್ ನಿಯಮ ಉಲ್ಲಂಘನೆ ಮಾಡಿದ 413 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸರ್ಕಾರದ ವರದಿ ತಿಳಿಸಿದೆ. ಯಾರು ಕೂಡ ವದಂತಿಗಳನ್ನು ನಂಬಬೇಡಿ ಮತ್ತು ವಿಡಿಯೋಗಳನ್ನು ವೈರಲ್ ಮಾಡುವ ವ್ಯಕ್ತಿಗಳ ಬಗ್ಗೆ ಅನುಮಾನ ಬಂದರೆ ಅಥವಾ ಯಾವುದೇ ಸಮಸ್ಯೆಯಾದರೆ ಸಹಾಯವಾಣಿ ಸಂಖ್ಯೆ 9233522822 ಕರೆ ಮಾಡಿ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ. ಲೂಟಿ ಮಾಡಿದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೊಲೀಸರು ಅಥವಾ ಹತ್ತಿರದ ಭದ್ರತಾ ಪಡೆಗಳಿಗೆ ಹಿಂದಿರುಗಿಸುವಂತೆ ಜನರಿಗೆ ಮನವಿ ಮಾಡಲಾಗಿದೆ.
ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕೂಡ ವಿರೋಧ ವ್ಯಕ್ತಪಡಿದ್ದಾರೆ, ಬಿಜೆಪಿ ಸರ್ಕಾರ ಇರುವ ಈಶ್ಯಾನ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವಿಲ್ಲ, ರಾಜಸ್ಥಾನ ಮತ್ತು ಛತ್ತೀಸ್‌ಗಢದಂತಹ ಕೆಲವು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಅತ್ಯಾಚಾರದ ಘಟನೆಗಳು ಹೆಚ್ಚು ಮತ್ತು ವೈರಲ್ ಆಗಿರುವ ವಿಡಿಯೋ ಹಿಂದೆ ಅನೇಕ ರಾಜಕೀಯವಿದೆ, ಸಂಸತ್ ಅಧಿವೇಶನದ ಸಮಯದಲ್ಲೇ ಇದನ್ನು ವೈರಲ್ ಮಾಡಲಾಗಿದೆ ಎಂದು ಹೇಳಿದರು.