“ಹೆಣ್ಣು ಸಂಸಾರದ ಕಣ್ಣು” ಜೀವ ನೀಡುವವಳು ಆಕೆ, ಜೀವನಕ್ಕೆ ಶಕ್ತಿ ತುಂಬುವವಳು ಆಕೆ

Share with

“ಸೃಷ್ಟಿಯೇ ಹೆಣ್ಣು” ಮಹಿಳೆ ಸೃಷ್ಟಿಕರ್ತೆ. ಜೀವ ನೀಡುವವಳು ಆಕೆ, ಜೀವನಕ್ಕೆ ಶಕ್ತಿ ತುಂಬುವವಳು ಆಕೆ ಹಾಗಾಗಿ ಮಹಿಳೆಯೇ ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವೇ ಇಲ್ಲ. ಮಹಿಳೆ ಎಂದರೆ ಮಮತೆ, ಶಕ್ತಿ, ಧೈರ್ಯ, ಪ್ರೀತಿ, ಕಾಳಜಿ ತೋರಿಸಿ ಪ್ರತಿಯೊಬ್ಬರ ಬದುಕಿನಲ್ಲೂ ತಾಯಿಯಾಗಿ, ಸೋದರಿಯಾಗಿ, ಮಡದಿಯಾಗಿ, ಅಜ್ಜಿಯಾಗಿ, ಸ್ನೇಹಿತೆಯಾಗಿ, ಶಿಕ್ಷಕಿಯಾಗಿ, ಮಾರ್ಗದರ್ಶಕಿಯಾಗಿ ಹೀಗೆ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸುತ್ತಾಳೆ. ಪ್ರತಿಯೊಬ್ಬರ ಬದುಕನ್ನು ರೂಪಿಸುವ ಮಹಿಳೆಗಾಗಿ ಮಾ.8ರಂದು ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ.

ಪ್ರತಿಯೊಬ್ಬರ ಬದುಕನ್ನು ರೂಪಿಸುವ ಮಹಿಳೆಗಾಗಿ ಮಾ.8ರಂದು ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ

“ಹೆಣ್ಣು ಸಂಸಾರದ ಕಣ್ಣು” ಎಂಬ ಮಾತಿನಂತೆ ಹೆಣ್ಣು ಹುಟ್ಟಿದ ಮನೆ ಹಾಗೂ ಸೇರಿದ ಮನೆ ಎರಡನ್ನೂ ಬೆಳಗುವಳು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಗು ಹುಟ್ಟಿದರೆ ಸಾಕು ಹೆತ್ತವರ ಕಣ್ಣಲಿ ಸಂತೋಷದ ಚಿತ್ತಾರವನ್ನು ಕಾಣಬಹುದು. ಏಕೆಂದರೆ ಹಿಂದೊಂದು ಕಾಲ ಇತ್ತು, ‘ಹೆಣ್ಣು ಮಗು ಹುಟ್ಟಿದರೆ ಅಸಡ್ಡೆ, ಗಂಡು ಮಗು ಹುಟ್ಟಿದರೆ ಗರ್ವ’. ಆದರೆ ಈಗ ಅದು ಬದಲಾಗಿ ಹೋಗಿ ಗಡಿ ಕಾಯುವುದರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನೂ ಸಮರ್ಥವಾಗಿ ನಿರ್ವಹಿಸಿ ಎಲ್ಲಾ ಭಾಗದಲ್ಲೂ, ಎಲ್ಲಾ ರಂಗದಲ್ಲೂ ಪ್ರಾಮುಖ್ಯತೆಯನ್ನು ಪಡೆದು ಹೆಣ್ಣು ಅಬಲೆಯಲ್ಲ, ಸಬಲೆ ಎಂದು ಜಗತ್ತಿಗೆ ತೋರಿಸಿ ಕೊಟ್ಟಿದ್ದಾಳೆ.

ಹುಟ್ಟಿದಾಗ ಮುಖದಲ್ಲಿ ನಗುವಿನ ಮಂದಹಾಸ ಬೀರಿದವಳು ಅವಳೇ ತಾಯಿ, ಬಿದ್ದಾಗ ಮೇಲೆಬ್ಬಿಸಿ ಜೋಪಾನ ಮಾಡಿದವಳು ಅವಳೇ ಅಕ್ಕ, ಆಟವಾಡುತ್ತ ತುಂಟಾಟ ಮಾಡುವವಳು ಅವಳೇ ತಂಗಿ, ಶಾಲೆಗೆ ಹೋಗುತ್ತಿರುವಾಗ ಪಾಠ ಹೇಳಿ ಕೊಡುತ್ತಿದ್ದವಳು ಅವಳೇ ಶಿಕ್ಷಕಿ, ಸದಾ ನಗುನಗುತ್ತಾ ಖುಷಿಯಿಂದ ಗಂಡನ ಸುಖ-ದುಃಖದಲ್ಲಿ ಸಹಬಾಗಿಯಾಗುವಳು ಅವಳೇ ಹೆಂಡತಿ, ಅಪ್ಪನೇ ಸರ್ವಸ್ವ ಎಂದು ತಂದೆಯ ನೋವಲ್ಲಿ ಬಾಗಿಯಾಗಿ ಕಣ್ಣೀರು ಹಾಕಿದವಳು ಅವಳೇ ಮಗಳು, ನಮ್ಮ ಸರಿ-ತಪ್ಪುಗಳನ್ನು ಹೇಳುತ್ತಾ, ಪೂರ್ಣವಿರಾಮವಿಲ್ಲದೆ ಕಥೆಗಳ ಮೂಲಕ ಮಾತನಾಡುವವಳು ಅವಳೇ ಅಜ್ಜಿ, ಸತ್ತಾಗ ಜಾಗ ಕೊಡುವಳು ಅವಳೇ ಭೂ ತಾಯಿ, ಹೀಗೆ ಹಲವು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಹೆಣ್ಣಿಗೆ ಸರಿಸಾಟಿ ಯಾರೂ ಇಲ್ಲ.

ಹಿಂದೊಂದು ಕಾಲದಲ್ಲಿ ಗಂಡು ಹೊರಗಡೆ ಹೋಗಿ ದುಡಿದರೆ, ಹೆಣ್ಣಿನ ಜೀವನ ಮನೆಯೊಳಗೆ.. ಮನೆಕೆಲಸ, ಮಕ್ಕಳು, ಅಡುಗೆ ಮುಂತಾದವುಗಳಿಗೆ ಸೀಮಿತವಾಗಿತ್ತು. ಬಳಿಕ ಹೆಣ್ಣು ಹೊರಗಡೆ ಹೋಗಿ ಸಮಾನ ರೀತಿಯಲ್ಲಿ ದುಡಿದರೆ ಕೂಡ ಸಂಬಳ ಕೊಡುವಾಗ ಗಂಡಿಗೆ ಹೆಚ್ಚು, ಹೆಣ್ಣಿಗೆ ಕಡಿಮೆ ಸಂಬಳ ಕೊಡುತ್ತಿರುವ ತಾರತಮ್ಯದ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ, ಹೆಣ್ಣು ಮಕ್ಕಳು ಗಂಡಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸಾಬೀತು ಪಡಿಸಿ ಕೇವಲ ಒಂದೇ ರಂಗದಲ್ಲಿ ಸೀಮಿತವಲ್ಲದೆ ಎಲ್ಲದರಲ್ಲೂ ಅವಳದ್ದೇ ಆದ ಚಾಪನ್ನು ತಂಡುಕೊಂಡವಳು ಹೆಣ್ಣು. ಹೀಗೆ ಜೀವನದ ಪ್ರತಿಯೊಂದು ಹಂತದಲ್ಲಿ ತನ್ನ ಪರಿಪೂರ್ಣ ಕರ್ತವ್ಯವನ್ನು ಪಾಲಿಸುವ ಹೆಣ್ಣು ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಡದಿಯಾಗಿ, ಮಗಳಾಗಿ, ಅಜ್ಜಿಯಾಗಿ ಇರುವವಳು ಹೆಣ್ಣು.

ಹೆಣ್ಣುಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ವಿಜ್ಞಾನ ಕ್ಷೇತ್ರದಲ್ಲಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೀಗೆ ಹತ್ತು-ಹಲವು ಕ್ಷೇತ್ರದಲ್ಲಿ ತನ್ನದೇ ಆದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಕೆಲವು ಮಹಿಳೆಯರು ಮದುವೆ ನಂತರ ಕುಟುಂಬ, ಸಂಸಾರ ಎಂದು ಸಾಧನೆಯ ಪಥದಿಂದ ವಿಮುಖರಾಗುತ್ತಾರೆ. ಇನ್ನೂ ಕೆಲವು ಮಹಿಳೆಯರು ಏನಾದರೂ ಸಾಧನೆ ಮಾಡಲು ಹೋಗುವ ದಾರಿಯಲ್ಲಿ ಅವರಿಗೆ ಅಗುವ ತೊಂದರೆಯಿಂದ ವಿಮುಖರಾಗುತ್ತಾರೆ, ಸಾಧನೆಯ ಪಥದಿಂದ ವಿಮುಖರಾಗುವ ಬದಲು ತೊಂದರೆಯನ್ನು ಎದುರಿಸಿ ನಿಲ್ಲುವ ಕೆಚ್ಚೆದೆ ನಾವು ಬೆಳೆಸಿಕೊಳ್ಳಬೇಕು. ಕೆಲವು ವಿಕಾರ ಮನಸ್ಥಿತಿಯುಳ್ಳ ಪುರುಷರು ನಮ್ಮ ಸಾಧನೆಗೆ ಅಡ್ಡಗಾಲು ಹಾಕಲು ಗಿಡುಗನಂತೆ ಹೊಂಚು ಹಾಕುತ್ತಿರುತ್ತಾರೆ. ಉದಾಹರಣೆ ಕೊಡುವುದಾದರೆ ನಿನಗೆ ಮದುವೆ ಅಗಿದೆ, ನೀನು ಹೆಂಗಸು ಮುಂತಾದ ಮಾತುಗಳ ಮುಖಾಂತರ ಅಥವಾ ಕೀಳು ಮಟ್ಟಿನ ಪದ ಬಳಸಿ ನಿಮ್ಮ ಮಾನಸಿಕ ಸ್ಥೆರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಾರೆ, ಇಂತಹ ಸಂದರ್ಭದಲ್ಲಿ ಅವರ ಮಾತುಗಳಿಗೆ ಕುಗ್ಗದೇ ಅವರನ್ನು ಎದುರಿಸಿ ನಿಲ್ಲುವ ಸಾಮಾರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಹೆಣ್ಣಿಗೆ ಬೆಲೆ ಕೊಡದ ಜಾಗದಲ್ಲಿ ನಿಲ್ಲಲೇಬಾರದು, ಸಾಧಿಸಲು ಹೊರಟವರಿಗೆ ನೂರು ದಾರಿಗಳು ಎನ್ನುವ ಹಾಗೆ ಪ್ರಯತ್ನಿಸಿದರೆ ಫಲ ಸಿಕ್ಕೇ ಸಿಗುತ್ತದೆ. ಹೆಣ್ಣೆಂದು ಅವಮಾನಿಸಿದವರಿಗೆ ಸಾಧಿಸಿ ತೋರಿಸುವ ಮೂಲಕ ಉತ್ತರವನ್ನು ನೀಡಬೇಕೆ ಹೊರತು ಸಾಧನೆಯ ಪಥದಿಂದ ವಿಮುಖರಾಗಬಾರದು.

ಆದರೂ ಕೆಲವೂಮ್ಮೆ ಅನಿಸುವುದಿದೆ, ನನ್ನನ್ನು ಹೆಂಗಸೆಂದು ಅವಮಾನಿಸುವ ಸಂದರ್ಭದಲ್ಲಿ ಅವರ ತಾಯಿ, ಅಕ್ಕ, ತಂಗಿ, ಮಗಳು, ಮಡದಿ ಅವರು ಕೂಡ ಹೆಣ್ಣಾಲ್ಲವೇ ಎಂದು. ಅವರ ತರ ನಾನು ಸಹ ಹೆಣ್ಣಾಲ್ಲವೇ…? ನಾನು ಕೂಡ ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಗಳಾಗಿ, ಮಡದಿಯಾಗಿ ಪಾತ್ರಗಳನ್ನು ನಿರ್ವಾಹಿಸಬಹುದು ಎನ್ನುವ ಸಾಮಾನ್ಯ ಜ್ಞಾನ ಕೂಡ ಇಲ್ಲವಾಯಿತೇ ಅವನಿಗೆ…? ಎಂದು. ಹೇ ಮನುಜ ಹೆಣ್ಣೆಂದರೆ ಯಾಕಿಷ್ಟು ಕೀಳು ಮನೋಭಾವನೆ ನಿನ್ನನು ಹೆತ್ತು, ಹೊತ್ತು, ಸಾಕಿ, ಸಲಹಿದವಳು ಹೆಣ್ಣಲ್ಲವೇ? ಆದರೂ ಅಂತವರಿಗೆ ನನ್ನದೊಂದು ಕಿವಿಮಾತು “ದಯವಿಟ್ಟು ಹೆಣ್ಣನ್ನು ತಾತ್ಸರದಿಂದ ನೋಡಬೇಡಿ, ಹೆಣ್ಣು ಮನೆಯ ದೀಪ ಇದ್ದಂತೆ ಅದು ಆರಿ ಹೋದರೆ, ಹೆಣ್ಣಿಲ್ಲದ ಈ ಮನುಕುಲ ಕಗ್ಗತ್ತಲೆಯಂತೆ”. ಆಕೆಯನ್ನು ಗೌರವದಿಂದ ಕಾಣು, ಅವಳ ಭಾವನೆಗಳಿಗೆ ಸ್ಪಂದಿಸು. ಇಲ್ಲವಾದಲ್ಲಿ ತಾಳ್ಮೆಯಿಂದ ಎಲ್ಲವನು ನಡೆಸಿಕೊಂಡು ಹೋಗುವ, ಮಮತೆಯಿಂದ ಎಲ್ಲರನ್ನೂ ಕಾಣುವ, ಪ್ರೀತಿ ಎಂಬ ವಾತ್ಸಲ್ಯವನ್ನು ಧಾರೆ ಎರೆಯುವ ನಾರಿ ಮುನಿದರೆ ಮಾರಿ ಅಗುವಳು ಎಚ್ಚರಿಕೆ.

✍️ ಅನಿತಾ ಪ್ಲೇವಿಯಾ ಮಿನೇಜಸ್


Share with

Leave a Reply

Your email address will not be published. Required fields are marked *