ಸುಳ್ಯ: ದನ ಮೈಮೇಲೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಅಮರಪಟ್ನೂರು ಗ್ರಾಮದ ಚೊಕ್ಕಾಡಿಯ ನಿವಾಸಿ ನಡುಗಲ್ಲು ರಾಧಾಕೃಷ್ಣ ಮೃತ ದುರ್ದೈವಿ. ಅವರು ಫೆ.27ರಂದು ತಮ್ಮ ದನವನ್ನು ಮೇಯಲು ಕಟ್ಟಿ ಹಾಕಲೆಂದು ತೋಟದ ಬದಿಯಲ್ಲಿ ಕರೆದೊಯ್ಯುತ್ತಿರುವಾಗ ದನವು ಆಕಸ್ಮಿಕವಾಗಿ ಬರೆಯಿಂದ ಜಾರಿದ್ದು, ದನದ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಅವರ ಕೈಯಲ್ಲಿದ್ದುದರಿಂದ ಅವರು ದನದೊಂದಿಗೆ ಎಳೆಯಲ್ಪಟ್ಟರು ದನವು ಅವರ ಮೈಮೇಲೆ ಬಿದ್ದಿತು.
ಅಲ್ಲಿದ್ದ ಕೊಕ್ಕೋ ಮರ ಮತ್ತು ಬರೆಯ ಮಧ್ಯದಲ್ಲಿ ರಾಧಾಕೃಷ್ಣ ಅವರು ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದರು. ಮನೆಯವರು ಹಾಗೂ ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.