ನವದೆಹಲಿ: ಸೆಪ್ಟೆಂಬರ್ 18-22 ರವರೆಗೆ ನಡೆದ ಸಂಸತ್ನ ವಿಶೇಷ ಅಧಿವೇಶನದಲ್ಲಿ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.
ಈ ಸಂಬಂಧ ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಒಂದನ್ನು ಹೊರಡಿಸಿದ್ದು, ರಾಷ್ಟ್ರಪತಿಗಳು ಗುರುವಾರವೇ ಮಸೂದೆಗೆ ಅಂಕಿತ ಹಾಕಿರುವುದಾಗಿ ತಿಳಿಸಿದೆ. ಈಗ ಅಧಿಕೃತವಾಗಿ ಮಸೂದೆಯನ್ನು ಸಂವಿಧಾನ (106ನೇ ತಿದ್ದುಪಡಿ) ಕಾಯ್ದೆ ಎಂದು ಕರೆಯಲಾಗುತ್ತದೆ.
ಮಸೂದೆಗೆ ಕಾನೂನು ರೂಪ ಸಿಕ್ಕಿದ್ದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರಿಗೆ 33% ರಾಜಕೀಯ ಮೀಸಲಾತಿ ನೀಡಲಿದೆ. ಮುಂದಿನ ಜಾತಿಗಣತಿ ಬಳಿಕ ಕ್ಷೇತ್ರ ಪುನರ್ ವಿಂಗಡಣೆಯಾಗಲಿದ್ದು, ಆ ಬಳಿಕವಷ್ಟೆ ಈ ಕಾನೂನು ಜಾರಿಗೆ ಬರಲಿದೆ ಎಂದು ಕಾನೂನು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.