ದುಬೈ: ಅತ್ಯಂತ ವಿವಾದಾತ್ಮಕ ಏಷ್ಯಾ ಕಪ್ 2025 ಮುಗಿದಿದೆ. ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸಿ ತನ್ನ ಅಜೇಯ ಚೈತ್ರಯಾತ್ರೆಯನ್ನು ಮುಂದುವರಿಸಿತು. ಏಷ್ಯಾ ಕಪ್ ಇತಿಹಾಸದಲ್ಲಿ ದಾಖಲೆಯ 9ನೇ ಬಾರಿಗೆ ಚಾಂಪಿಯನ್ ಆಗಿ ಮೂಡಿ ಬಂದಿದೆ.

ಪಂದ್ಯದ ಬಳಿಕ ಟ್ರೋಫಿ ವಿಚಾರವಾಗಿ ಹಲವು ವಿವಾದಗಳು ನಡೆಯಿತು. ಪಾಕಿಸ್ತಾನದ ಸಚಿವರೂ ಆಗಿರುವ ಎಸಿಸಿ ಮುಖ್ಯಸ್ಥ ಮೊಸ್ಸಿನ್ ನವ್ವ ಕೈಯಿಂದ ಭಾರತ ತಂಡವು ಟ್ರೋಪಿ ಪಡೆಯಲು ನಿರಾಕರಿಸಿದ ಘಟನೆ ನಡೆಯಿತು.
ಇದಾದ ಬಳಿಕ ನಡೆದ ಪತ್ರಿಕಾಗೋಷ್ಟಿಯಲ್ಲಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಅವರು, ತನ್ನ ಸಂಪೂರ್ಣ ಏಷ್ಯಾಕಪ್ ಕೂಟದ ಎಲ್ಲಾ ಪಂದ್ಯದಗಳ ಒಟ್ಟು ಸಂಭಾವನೆಯನ್ನು ಭಾರತೀಯ ಸೇನೆಯ ನಿಧಿಗೆ ಅರ್ಪಿಸುತ್ತೇನೆ ಎಂದು ಘೋಷಣೆ ಮಾಡಿದರು.
ಸೂರ್ಯಕುಮಾರ್ ಯಾದವ್ ಅವರ ನಡೆಯನ್ನು ಅನುಕರಿಸಿದ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಪತ್ರಿಕಾಗೋಷ್ಠಿಯಲ್ಲಿ ಘೋಷಣೆಯೊಂದನ್ನು ಮಾಡಿದರು. ಭಾರತದ ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಬಾಧಿತರಾದ ಕುಟುಂಬಗಳಿಗೆ ನಮ್ಮ ತಂಡವು ತಮ್ಮ ಪಂದ್ಯ ಶುಲ್ಕವನ್ನು ದಾನ ಮಾಡಲಿದೆ ಎಂದು ಸಲ್ಮಾನ್ ಹೇಳಿದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಸಲ್ಮಾನ್ ಅಲಿ ಅಘಾ ಹೇಳಿದಂತೆ ಭಾರತ ನಡೆಸಿದ ಆಪರೇಷನ್ ಸಿಂದೂರ್ ನಲ್ಲಿ ಪಾಕಿಸ್ತಾನದ ಯಾವುದೇ ಅಮಾಯಕ ನಾಗರಿಕರು ಮೃತಪಟ್ಟಿಲ್ಲ. ಭಾರತೀಯ ಸೇನೆಯು ಪಾಕಿಸ್ತಾನದಲ್ಲಿರುವ ಉಗ್ರ ಶಿಬಿರಗಳನ್ನು ಗುರಿಯಾಗಿಸಿ ನಿಖರ ಗುರಿಯಿಟ್ಟಿತ್ತು. ಆಪರೇಷನ್ ಸಿಂದೂರ್ ನಲ್ಲಿ ಬಲಿಯಾದ ಎಲ್ಲರೂ ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತೋಯ್ದಾದ ಉಗ್ರರು.
ಕುಖ್ಯಾತ ಉಗ್ರ ಮಸೂದ್ ಅಜರ್’ನ ಬಾವ, ಉಗ್ರ ಯೂಸುಫ್ ಅಜರ್, ಜೈಶ್ ಮುಖ್ಯಸ್ಥ ಮೊಹಮ್ಮದ್ ಜಮೀಲ್ ಅಹಮದ್, ಆತನ ಮಗ ಹಂಝಾ ಜಮೀಲ್ ಸೇರಿ ಹಲವು ಉಗ್ರರು ಸಾವನ್ನಪ್ಪಿದ್ದರು.
ಭಾರತದ ಆಪರೇಷನ್ ಸಿಂದೂರ್ ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಮ್ಮ ಪಂದ್ಯದ ಶುಲ್ಕವನ್ನು ನೀಡುತ್ತೇವೆ ಎಂದ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಉಗ್ರರಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂಬ ಆಯಾಮದಲ್ಲಿ ನೋಡಲಾಗುತ್ತಿದೆ.




