ಉಡುಪಿ: ನಗರಸಭೆ ಅಧಿಕಾರಿಗಳ ಮೇಲೆ ಪ್ಲಾಸ್ಟಿಕ್ ವ್ಯಾಪಾರಿಗಳು ಹಲ್ಲೆಗೆ ಯತ್ನಿಸಿದ ಘಟನೆ ಉಡುಪಿ ನಗರದ ಮೀನು ಮಾರುಕಟ್ಟೆ ಬಳಿ ನಡೆದಿದೆ.
ವ್ಯಾಪಾರಿಗಳು ಓಮ್ಮಿ ಕಾರಿನಲ್ಲಿ ಪ್ಲಾಸ್ಟಿಕ್ ಕವರ್ ತುಂಬಿಕೊಂಡು ಮಾರಾಟಕ್ಕೆಂದು ಬಂದಿದ್ದರು. ಈ ಮಾಹಿತಿ ಆಧರಿಸಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ಲಾಸ್ಟಿಕ್ ಕವರ್‌ಗಳನ್ನು ಮೀನುಗಾರರಿಗೆ ಮಾರಾಟ ಮಾಡುತ್ತಿದ್ದಾಗ ಅಧಿಕಾರಿಗಳು ಪ್ಲಾಸ್ಟಿಕ್ ಕವರ್ ವಶಪಡಿಸಲು ಮುಂದಾಗುತ್ತಿದ್ದಂತೆ ಹಲ್ಲೆಗೆ ಯತ್ನಿಸಲಾಗಿದೆ. ಅಧಿಕಾರಿಗಳಾದ ಸುರೇಂದ್ರ ಮತ್ತು ಮನೋಜ್ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ವಿಷಯ ಅರಿತು ಸ್ಥಳಕ್ಕೆ ನಗರಸಭೆ ಕಮೀಷನರ್ ರಾಯಪ್ಪ ಮತ್ತು ಪೊಲೀಸರು ದೌಡಾಯಿಸಿದ್ದಾರೆ. ಬಳಿಕ ಉಡುಪಿ ನಗರ ಠಾಣೆಗೆ ವ್ಯಾಪಾರಿಗಳನ್ನು ಕರೆದೊಯ್ದು ರಾಜಿ ಮೂಲಕ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ.