ಮಂಗಳೂರು: ಅಪರಾಧ ಪ್ರಕರಣಗಳ ಬೆನ್ನು ಬಿದ್ದು ಅಪರಾಧಿಗಳನ್ನು ಬಂಧಿಸುವಲ್ಲಿ ನಿಷ್ಣಾತನಾಗಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಚಂದ್ರ ಕೆ.ಅಡೂರು(49) ಶನಿವಾರ ನಿಧನ ಹೊಂದಿದ್ದಾರೆ.
ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಚಂದ್ರ ಕೆ.ಅಡೂರು ಅವರು ಕೆಲ ದಿನಗಳ ಹಿಂದೆ ಅನಾರೋಗ್ಯ ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಕರ್ತವ್ಯದಲ್ಲಿದ್ದ ಅವರು ಬಳಿಕ ಏಕಾಏಕಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶನಿವಾರ ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಚಂದ್ರ ಅಡೂರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದು, ಅಂತ್ಯಕ್ರಿಯೆ ಹುಟ್ಟೂರು ಕಾಸರಗೋಡಿನ ಅಡೂರುನಲ್ಲಿ ನಡೆಯಲಿದೆ.
ಚಂದ್ರ ಕೆ.ಅಡೂರು ಅವರ ನಿಧನಕ್ಕೆ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅವರ ಸಹೊದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.