ಮಂಗಳೂರು: ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ‘ಎಂಡಿಎಂಎ’ಯನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ನಗರದ ಉಳ್ಳಾಲ ಬೈಲ್ ಪರಿಸರದಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕದ್ರವ್ಯ ಎಂಡಿಎಂಎ ಮಾರಾಟದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳ್ಳಾಲ ಸುಭಾಷ್ ನಗರ ನಿವಾಸಿ ಜಾಕೀರ್(29), ಅರ್ಕುಳ ಗ್ರಾಮದ ನಿವಾಸಿ ಕಾರ್ತಿಕ್ ಸುವರ್ಣ(27) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಒಟ್ಟು 20 ಗ್ರಾಮ್ ತೂಕದ 1,00,000 ರೂಪಾಯಿ ಮೌಲ್ಯದ ‘ಎಂಡಿಎಂಎ’ಯನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಇತರ ಸ್ವತ್ತುಗಳಾದ ಸ್ಕೂಟರ್, ಎರಡು ಮೊಬೈಲ್ ಫೋನ್ ಗಳು, 3,300 ರೂಪಾಯಿ ನಗದು ಮತ್ತು ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,15,000 ರೂಪಾಯಿಗಳು ಎಂದು ಅಂದಾಜಿಸಲಾಗಿದ್ದು, ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿರುತ್ತದೆ.