ಉಡುಪಿ: ರಾಮರಾಜ್ಯದ ಪರಿಕಲ್ಪನೆಯಲ್ಲಿ ದೀನದಲಿತರ, ಅನಾಥ ಜನರ ಪಶು ಪಕ್ಷಿ ಪ್ರಾಣಿಗಳ ಶುಶ್ರೂಷೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಉಡುಪಿಯ ಇಬ್ಬರು ಸಾಮಾಜಿಕ ಧುರೀಣರಿಗೆ ಅಯೋಧ್ಯಾ ಮಂಡಲೋತ್ಸವ ಪುರಸ್ಕಾರದ ಮೂಲಕ ಶ್ರೇಷ್ಠ ಗೌರವ ಪ್ರಾಪ್ತಿಯಾಗಿದೆ.
ನಿತ್ಯಾನಂದ ಒಳಕಾಡು ಮತ್ತು ವಿಶು ಶೆಟ್ಟಿ ಅಂಬಲಪಾಡಿಯವರಿಗೆ ಅಯೋಧ್ಯಾ ರಾಮಮಂದಿರ ಟ್ರಸ್ಟಿಗಳಾದ ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀರಾಮ ದೇವರ ಮಂಡಲೋತ್ಸವದಲ್ಲಿ ಮಾ.1ರಂದು ನಡೆದ ಉತ್ಸವದಲ್ಲಿ ಶ್ರೀರಾಮ ದೇವರಿಗೆ ಅಭಿಷೇಕ ಮಾಡಿದ ತಲಾ ಒಂದು ಕೆಜಿ ತೂಕದ ಒಂದು ಲಕ್ಷ ಮೌಲ್ಯದ ರಜತ ಕಲಶವನ್ನು ನೀಡಿ ಇಬ್ಬರ ಸಾಮಾಜಿಕ ಕಾರ್ಯಗಳನ್ನು ಅಭಿನಂದಿಸಿ ಸನ್ಮಾನಿಸಿದ್ದಾರೆ.
ಶ್ರೀಗಳು ಇಬ್ಬರನ್ನೂ ಶ್ರೀಮಠದ ವೆಚ್ಚದಲ್ಲೇ ವಿಮಾನದಲ್ಲಿ ಅಯೋಧ್ಯೆಗೆ ಬರಮಾಡಿಕೊಂಡು ಪುರಸ್ಕರಿಸಿ ಅವರ ಸಮಾಜಕಾರ್ಯಗಳನ್ನು ಕೊಂಡಾಡಿದ್ದಾರೆ. ರಾಮಮಂದಿರವಾಗಿದೆ ಇನ್ನು ರಾಮರಾಜ್ಯವಾಗಬೇಕು. ಅದಕ್ಕಾಗಿ ಎಲ್ಲರೂ ದೀನಜನರ ಸೇವೆ ಗೋಸೇವೆಗಳಿಗೆ ಮುಂದಾಗಿ ಎಲ್ಲರ ಕ್ಷೇಮ ಸಮಾಜದ ಸುಖ ಸಮೃದ್ಧಿಗಾಗಿ ಶ್ರಮಿಸಿಬೇಕೆಂದು ಎಲ್ಲೆಡೆ ಕರೆನೀಡುತ್ತಿರುವ ಶ್ರೀಗಳು, ಆ ಕಾರ್ಯಗಳನ್ನೇ ದಶಕಗಳಿಂದ ನಿಸ್ಮೃಹವಾಗಿ ನಡೆಸುತ್ತಿರುವ ಒಳಕಾಡು ಮತ್ತು ವಿಶು ಶೆಟ್ಟರನ್ನು ಸಂಮಾನಿಸಿರುವುದು ಅತ್ಯಂತ ವಿಶೇಷವಾಗಿದೆ. ಉಡುಪಿಯ ಇಬ್ಬರು ಸಾಮಾಜಿಕ ಮುಖಂಡರ ಸೇವಾ ಕಾರ್ಯಗಳಿಗೆ ಅಯೋಧ್ಯೆಯಲ್ಲಿ ಪುರಸ್ಕಾರ ದೊರೆತಿರುವುದು ಉಡುಪಿಗೇ ಸಂದ ಗೌರವವೂ ಆಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ರಘುಪತಿ ಭಟ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ , ಅಂತಾರಾಷ್ಟ್ರೀಯ ಖ್ಯಾತಿಯ ವಯಲಿನ್ ಮಾಂತ್ರಿಕ ಡಾ ಎಲ್ ಸುಬ್ರಮಣಿಯಮ್ , ಶ್ರೀಗಳ ಆಪ್ತರಾದ ವಾಸುದೇವ ಭಟ್ ಪೆರಂಪಳ್ಳಿ, ಶ್ರೀನಿವಾಸ ಪ್ರಸಾದ್, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣಭಟ್, ಮಹೇಶ್ ಠಾಕೂರ್, ಸುವರ್ಧನ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.