‘ಅಧ್ಯಕ್ಷ’, ‘ಪೊಗರು’, ‘ರನ್ನ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ನಂದ ಕಿಶೋರ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ನಟ ಸುದೀಪ್ ಅವರ ಹೆಸರು ಹೇಳಿ ನಂದ ಕಿಶೋರ್ 22 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಯುವ ನಟ ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ.
2016ರಲ್ಲಿ ಜಿಮ್‌ನಲ್ಲಿ ಪರಿಚಯ ಆಗಿದ್ದ ನಿರ್ದೇಶಕ ನಂದ ಕಿಶೋರ್ ಅವರು ನನಗೆ ಫ್ಯಾಮಿಲಿ ಫ್ರೆಂಡ್ ತರಹ ಇದ್ರು. ಕಷ್ಟ ಅಂತ ನನ್ನ ಹತ್ತಿರ ದುಡ್ಡಿನ ಸಹಾಯ ಕೇಳಿದ್ದರು. ನಾನು ಬೇರೆಯವರ ಮುಖಾಂತರ ಅವರಿಗೆ ಸಹಾಯ ಮಾಡಿದ್ದೆ. ಸುದೀಪ್ ಸರ್ ಅವರ ಜೊತೆಗೆ ಸಂಪರ್ಕ ಸಿಗುತ್ತದೆ, ನಂದ ಕಿಶೋರ್ ಸರ್ ಸುದೀಪ್ ಅವರ ಜೊತೆಗೆ ಇರುವವರು. ನನಗೂ ಕೂಡ ಸಿನಿರಂಗದಲ್ಲಿ ಬೆಳಿಬೇಕು ಅನ್ನೋ ಆಸೆ ಇತ್ತು.
ಹಾಗಾಗಿ ಒಬ್ಬ ನಿರ್ದೇಶಕನ ಜೊತೆ ಆತ್ಮೀಯತೆಯಿಂದ ಇದ್ದರೆ, ನನ್ನು ಕನಸು ನನಸಾಗುತ್ತದೆ ಅನ್ನೋ ಯೋಚನೆ ಇತ್ತು” ಎಂದು ಮಾಧ್ಯಮಗಳಿಗೆ ಯುವ ನಟ ಶಬರೀಶ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಸುದೀಪ್ ಸರ್‌ಗೋಸ್ಕರ ಫ್ರೆಂಡ್ಮಿಪ್ ಮಾಡಿದೆ!?
“ನನಗೆ ಸುದೀಪ್ ಸರ್ ಅವರನ್ನು ಸಂಪರ್ಕ ಮಾಡಬೇಕು ಅವರ ಜೊತೆ ಕ್ರಿಕೆಟ್ ಆಡಬೇಕು ಅನ್ನೋ ಕನಸಿತ್ತು. ನಂದ ಕಿಶೋರ್ ಅವರು ಸುದೀಪ್ ಸರ್ ಜೊತೆಗೆ ತುಂಬಾ ಆತ್ಮೀಯವಾಗಿದ್ರು ಅನ್ನೋ ಕಾರಣಕ್ಕೆ, ನಾನು ಅವರ ಜೊತೆ ಫ್ರೆಂನ್ಶಿಪ್ ಬೆಳೆಸಿಕೊಂಡಿದ್ದೆ. ಅದನ್ನೇ ಬಂಡವಾಳವಾಗಿಟ್ಟುಕೊಂಡು ಅವರು ನನ್ನ ಬಳಿ ದುಡ್ಡು ಕೇಳೋದಕ್ಕೆ ಶುರು ಮಾಡಿದ್ದರು. ನಾನು ಬೇರೆಯವರ ಬಳಿ ಹಣ ಪಡೆದು ಅವರಿಗೆ ಕೊಟ್ಟಿದ್ದೆ. ಬಳಿಕ ಹೀಗೆ ಪದೇ ಪದೇ ಹಣವನ್ನು ಪಡೆದಿದ್ದರು. ಆದರೆ ಒಂದು ರೂಪಾಯಿ ಬಡ್ಡಿ ಕೂಡ ಅವರು ಕೊಟ್ಟಿಲ್ಲ. ಕೊನೆಗೆ ಹಣ ಕೇಳಿದ್ದಕ್ಕೆ ಸಿನಿಮಾ ಮಾಡ್ತೀನಿ ಸಿನಿಮಾದಲ್ಲಿ ಪಾತ್ರ ಕೊಡ್ತೀನಿ ಅಂತ ಹೇಳಿದ್ದರು” ಎಂದಿದ್ದಾರೆ ಶಬರೀಶ್ ಶೆಟ್ಟಿ.
“ಆದರೆ ‘ಪೊಗರು’ ಸಿನಿಮಾದಲ್ಲಿ ಅವಕಾಶ ಕೊಡಲಿಲ್ಲ. ನಂತರ ‘ಮುಕುಂದ ಮುರಾರಿ’ ಸಿನಿಮಾ ಮಾಡಿದ್ದರು. ಅಲ್ಲಿಯೂ ಅವರು ನನಗೆ ಅವಕಾಶ ಕೊಟ್ಟಿಲ್ಲ. ‘ರಾಣಾ’ ಸಿನಿಮಾದಲ್ಲಿ ವಿಲನ್ ಪಾತ್ರ ಕೊಡ್ತೀನಿ ಅಂದಿದ್ದರು. ಹೀಗೆ ಹೇಳಿಕೊಂಡೆ ಬರುತ್ತಿದ್ದರು. ನನಗೆ ದುಡ್ಡು ಕೊಟ್ಟವರು ನನ್ನ ಮೇಲೆ ಒತ್ತಡ ಹಾಕುತ್ತಿದ್ದರು. ಹಾಗಾಗಿ ಅವರನ್ನು ದುಡ್ಡು ಕೇಳಿದಾಗ, ‘ನನ್ನ ಹತ್ತಿರ ದುಡ್ಡು ಇಲ್ಲ.
ಸಿನಿಮಾ ಗೆದ್ದ ಮೇಲೆ ದುಡ್ಡು ಕೊಡ್ತೀನಿ’ ಅಂದಿದ್ದರು. ಆಗ ನನ್ನ ಬಳಿ ಇದ್ದ ಒಡವೆಗಳನ್ನೆಲ್ಲ ಅಡವಿಟ್ಟು ನನ್ನ ಸಾಲ ತೀರಿಸಿದೆ. ಈಗ ನನ್ನ ಬಳಿ ಚಿನ್ನವೂ ಇಲ್ಲ ಹಣವೂ ಇಲ್ಲ” ಎಂದರು ಶಬರೀಶ್ ಶೆಟ್ಟಿ.
ಹಣ ವಾಪಾಸ್ ಕೇಳಿದ್ರೆ ಧಮ್ಮಿ!
“ಅವರಿಂದ ನನಗೆ 22 ಲಕ್ಷ ರೂಪಾಯಿ ಬರಬೇಕು. ಕೇಳಿದ್ರೆ ಧಮ್ಮಿ ಹಾಕುತ್ತಿದ್ದಾರೆ. ‘ಏನು ಬೇಕಾದರೂ ಮಾಡೋ, ನಾನು ಲಾಯರ್ ಮೂಲಕ ಕಾನೂನು ಹೋರಾಟ ಮಾಡುತ್ತೇನೆ’ ಅಂತಾರೆ. ಏನೋ ಒಂದು ಕನಸು ಕಟ್ಟಿಕೊಂಡು ನಮ್ಮಂತಹ ಪುಟ್ಟ ಕಲಾವಿದರು ಬಂದಿರುತ್ತೇವೆ. ಹಿರಿಯ ಕಲಾವಿದನ ಮಗನಾಗಿ, ದೊಡ್ಡ ನಿರ್ದೇಶಕನಾಗಿ, ಒಳ್ಳೆಯ ಹೆಸರು ಇರುವ ವ್ಯಕ್ತಿ ಹೀಗೆ ಮಾಡಿದ್ರೆ ಹೇಗೆ?” ಎಂದು ನಟ ಶಬರೀಶ್ ಶೆಟ್ಟಿ ನಿರ್ದೇಶಕ ನಂದ ಕಿಶೋರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.