ಉಡುಪಿ: ಅಪರೂಪ ಹಾಗೂ ಆಕರ್ಷಣೀಯವಾದ ‘ಸ್ಪಾಟೆಡ್ ಮೊರೈ ಈಲ್ಸ್’ ಮೀನು ಸುರತ್ಕಲ್ ಬೀಚ್ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರ ವೈಜ್ಞಾನಿಕ ಹೆಸರು ಜಿಮ್ನೋಥೊರಾಕ್ಸ್ ಮೊರಿಂಗಾ ಆಗಿದ್ದು, ಇದನ್ನು ಸ್ಥಳೀಯವಾಗಿ ಆರೋಳಿ ಮೀನು ಎಂಬುದಾಗಿ ಕರೆಯಲಾಗುತ್ತದೆ. ಕನ್ನಡಿ ಹಾವಿನಂತೆ ಕಂಡು ಬರುವ ಈ ಮೀನು ಕಪ್ಪು ಚುಕ್ಕೆಗಳಿಂದ ಬಹಳಷ್ಟು ಆಕರ್ಷಣೀಯವಾಗಿದೆ.
ಈ ಜಾತಿಯ ಮೀನು ಹೆಚ್ಚಾಗಿ ಕೆಂಪು ಬಣ್ಣದಿಂದ ಕೂಡಿರುತ್ತದೆ. ಆದರೆ ಈ ರೀತಿ ಚುಕ್ಕೆಗಳೊಂದಿಗೆ ಕಂಡುಬಂದಿರುವ ಈ ಮೀನು ಸ್ಥಳೀಯರಿಗೆ ಅಪರೂಪವಾಗಿದೆ. ಈ ಮೀನು ದ್ವೀಪದ ಬಳಿ ಇರುವ ಹವಳ ದಿಬ್ಬದಂತಹ ಸ್ಥಳಗಳಲ್ಲಿ ವಾಸ ಮಾಡುತ್ತದೆ. ಕಡಲಿನ ಅಲೆಗಳ ಅಬ್ಬರದಿಂದ ತೀರಕ್ಕೆ ಬಂದಿರಬಹುದು ಎಂದು ಮಂಗಳೂರು ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಮಂಗಳೂರು ಪ್ರಾದೇಶಿಕ ಕೇಂದ್ರ ವಿಜ್ಞಾನಿ ರಾಜೇಶ್ ಕೆ.ಎಂ. ತಿಳಿಸಿದ್ದಾರೆ.
ಈ ಮೀನು ಸಾಮಾನ್ಯವಾಗಿ 60ಸೆ.ಮೀ. ಉದ್ದ ಬೆಳೆಯುತ್ತದೆ. ಗರಿಷ್ಠ 2.51 ಕೆ.ಜಿ. ತೂಗುತ್ತದೆ. ಈ ಮೀನು ಒಂಟಿಯಾಗಿ ವಾಸ ಮಾಡುತ್ತದೆ. ಉಷ್ಣ ವಲಯದ ನೀರಿನಲ್ಲಿ ವಾಸಿಸುವ ಈ ಮೀನುಗಳು ಮೊಟ್ಟೆ ಇಡಲು ವಲಸೆ ಹೋಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ತುಳುವಿನಲ್ಲಿ ಈ ಮೀನುನನ್ನು ಮರಂಚಾ ಮೀನು ಎಂದು ಕರೆಯುತ್ತಾರೆ. ಕಲ್ಲು ಇರುವ ಪ್ರದೇಶದಲ್ಲಿ ಈ ಮೀನು ಗಾಳಕ್ಕೆ ಅಪರೂಪಕ್ಕೆ ಸಿಗುತ್ತದೆ. ಇದರ ಹಲ್ಲು ಹರಿತವಾಗಿರುತ್ತದೆ. ಸ್ಥಳೀಯರು ಈ ಮೀನನ್ನು ತಿನ್ನುವುದಿಲ್ಲ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.