ಬಂಟ್ವಾಳ: ಮಂಗಳೂರು ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಏಳು ಮೀಟರ್ ನೀರು ಸಂಗ್ರಹ ಮಾಡಲು ಹೊರಟಿದ್ದು, ಇದರಿಂದಾಗಿ ಕೃಷಿಕರ ಭೂಮಿ ಜಲಾವೃತಗೊಳ್ಳಲಿದ್ದು ಹಾಗಾಗಿ ರೈತರಿಗೆ ಸೂಕ್ತವಾದ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿ ಬಂಟ್ವಾಳದ ರೈತ ಸಂಘವು ಸರಕಾರಕ್ಕೆ ಮನವಿಯನ್ನು ನೀಡಿದೆ.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಅವರು ಮಂಗಳೂರಿಗೆ ಕುಡಿಯುವ ನೀರಿನ ಸಲುವಾಗಿ ನೇತ್ರಾವತಿಯಲ್ಲಿ 6.50 ಮೀಟರ್ ನೀರು ಸಂಗ್ರಹಿಸಲಾಗಿದ್ದು ಈ ಬಾರಿ ನೀರಿನ ಕೊರತೆ ಆಗದು ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ನೀರು ಸಂಗ್ರಹದ ನಿಮಿತ್ತ ಸಂತ್ರಸ್ತ ರೈತರಿಗೆ 6 ಮೀಟರ್ ಗೆ ಭೂ ಪರಿಹಾರ ಒದಗಿಸಿದ್ದು, ಆದರೆ ಎಲ್ಲಾ ರೈತರಿಗೆ ಇನ್ನೂ ದೊರೆತಿರುವುದಿಲ್ಲ, ಪ್ರಸ್ತುತ ಆರುವರೆ ಮೀಟರ್ ಗೆ ನೀರು ಸಂಗ್ರಹಣೆ ಮಾಡಿದ್ದು ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ವರತೆ ಪ್ರದೇಶ ಸೇರಿಸಿ ನೀರು ಸಂಗ್ರಹಕ್ಕೆ 1 ಮೀಟರ್ ಹೆಚ್ಚುವರಿಯಾಗಿ ಅಂದರೆ ಏಳುವರೆ ಮೀಟರ್ ಗೆ ಏರಿಸಲು ರೈತರ ಸಮಕ್ಷಮ ಸರ್ವೇ ಮಾಡಿ ಸಂತ್ರಸ್ಥ ರೈತರಿಗೆ ಸೂಕ್ತ ಪರಿಹಾರ ಜಿಲ್ಲಾಡಳಿತದ ಮೂಲಕ ಒದಗಿಸಿಕೊಡುವಂತೆ ಸಜಿಪ ಮುನ್ನೂರು ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಣ್ ಅವರ ಮೂಲಕ ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ ಎಮ್. ಸುಬ್ರಹ್ಮಣ್ಯ ಭಟ್ ನೇತೃತ್ವದ ನಿಯೋಗವು ಮನವಿಯನ್ನು ಸಲ್ಲಿಸಿತು.
ಈ ನಿಯೋಗದಲ್ಲಿ ಎನ್.ಕೆ.ಇದಿನಬ್ಬ, ಅಬ್ದುಲ್ ಖಾದರ್, ಎನ್ .ರಾಮ, ಹುಸೇನಾರ್, ಬಿ.ಅಣ್ಣಪ್ಪಯ್ಯ, ಅಬ್ಬಾಸ್ ಇದ್ದರು.