
ಬಂಟ್ವಾಳ: ವಿಶ್ವ ಹಿಂದು ಪರಿಷದ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭ ಬಜರಂಗದಳ ವತಿಯಿಂದ ಶೌರ್ಯ ಜಾಗರಣಾ ಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಈ ರಥವು ಅ.6 ಕ್ಕೆ ಸುಳ್ಯಕ್ಕೆ ಪ್ರವೇಶಿಸಿ ನಂತರ ಅ.7 ರಂದು ಪುತ್ತೂರಿಗೆ ಬಂದು ಅ.8ರಂದು ಬಂಟ್ವಾಳಕ್ಕೆ ಬರಲಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 3ಕ್ಕೆ ಬಿ.ಸಿ ರೋಡಿನ ಕೈಕಂಬದಿಂದ ಶೋಭಾಯಾತ್ರೆ ಹಾಗೂ ಜಾಗೃತ ಹಿಂದೂ ಸಮಾವೇಶ ನಡೆಯಲಿದೆ ಎಂದು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಅಧ್ಯಕ್ಷ ಹಾಗೂ ರಥಯಾತ್ರೆ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರಸಾದ್ ಕುಮಾರ್ ತಿಳಿಸಿದರು.
ಶೌರ್ಯ ಜಾಗರಣಾ ರಥಯಾತ್ರೆ ಸ್ವಾಗತ ಸಮಿತಿ ರಘು ಎಲ್. ಶೆಟ್ಟಿ ಅಧ್ಯಕ್ಷತೆಯಲ್ಲಿ ವಿ.ಹಿಂ.ಪ ಬಜರಂಗದಳದ ಬಂಟ್ವಾಳ, ಕಲ್ಲಡ್ಕ, ವಿಟ್ಲ ಮತ್ತು ವೇಣೂರು ಪ್ರಖಂಡಗಳನ್ನು ಜತೆಗೂಡಿಸಿ ಬಂಟ್ವಾಳದ ಬಸ್ತಿಪಡ್ಪು ಮೈದಾನದಲ್ಲಿ ಸಮಾವೇಶ ಆಯೋಜಿಸಿದೆ. ರಥಯಾತ್ರೆ ಬಂಟ್ವಾಳ ತಾಲೂಕಿಗೆ ಪ್ರವೇಶಿಸುವ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಬಿ.ಸಿ ರೋಡ್ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಬಳಿಕ ಜಾಗೃತ ಹಿಂದೂ ಸಮಾವೇಶ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸಾಧ್ವಿ ದೇವಿ ಸರಸ್ವತಿ ಜೀ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಶ್ರೀ ಕಣಿಯೂರು ಮಹಾಬಲ ಸ್ವಾಮೀಜಿ ಹಾಗೂ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ವಿ.ಹಿಂ.ಪ ಕರ್ನಾಟಕ ದ.ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ ಪುರಾಣಿಕ್ ಮತ್ತು ಆರೆ.ಎಸ್.ಎಸ್ ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣ ಅವರು ಭಾಗವಹಿಸಲಿದ್ದಾರೆ.
ಸಹಸ್ರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯುವ ಉದ್ದೇಶದಿಂದ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ಪ್ರಮುಖರಾದ ಗುರುರಾಜ್ ಬಂಟ್ವಾಳ, ಸಚಿನ್ ಮೆಲ್ಕಾರ್, ಪದ್ಮನಾಭ ಕಟ್ಟೆ ಉಪಸ್ಥಿತರಿದ್ದರು.