ರಾಜ್ಯದಲ್ಲಿ ಸುಳ್ಳು ಸುದ್ದಿ ಪತ್ತೆಗೆ ವಿಶೇಷ ತಂಡ

Share with

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾಕಾರಿ ಸುದ್ದಿ ಹರಿಬಿಡುವವರ ಮೇಲೆ ನಿಗಾವಹಿಸಲು ಠಾಣಾ ಮಟ್ಟದಿಂದ ಆಯುಕ್ತರ ಮಟ್ಟದಲ್ಲಿ ಮೂರು ಹಂತದ ವಿಶೇಷ ತಂಡ ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೆಲವೊಂದು ಪೋಸ್ಟ್ಗಳೇ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ಮೇಲೆ ನಿಗಾ ವಹಿಸಲಾಗುವುದು. ಕೆಲವೊಂದು ವಿಷಯಗಳಲ್ಲಿ ಕಂಡು ಬರುವ ವಿರೋಧ, ಪ್ರಚೋದನಾಕಾರಿ ಹಾಗೂ ತಪ್ಪು ಮಾಹಿತಿಯ ಪೋಸ್ಟ್ಗಳಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಈಗ ಬೆಂಗಳೂರು ನಗರದಲ್ಲಿ ಠಾಣಾ ಮಟ್ಟದಿಂದ ಆಯುಕ್ತರ ಕಚೇರಿವರೆಗೆ ಮೂರು ಹಂತದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಂದು ಠಾಣೆಯಲ್ಲಿ ತಾಂತ್ರಿಕವಾಗಿ ಪರಿಣಿತಿ ಹೊಂದಿರುವ ಇಬ್ಬರು ಸಿಬ್ಬಂದಿ ಆಯ್ಕೆ ಮಾಡಿ ತಂಡ ರಚಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ಪ್ರಚೋದನಾಕಾರಿ ಹಾಗೂ ವಿರೋಧ ಪೋಸ್ಟ್ಗಳನ್ನು ಆ ಸಿಬ್ಬಂದಿ ಪತ್ತೆ ಹಚ್ಚಿ ಮಾಹಿತಿ ನೀಡಲಿದ್ದಾರೆ. ಇದೇ ರೀತಿ ಡಿಸಿಪಿ ಕಚೇರಿಯಲ್ಲಿ ಮತ್ತೊಂದು ಸಣ್ಣ ಮಟ್ಟದ ತಂಡ ಹಾಗೂ ಆಯುಕ್ತರ ಕಚೇರಿಯಲ್ಲಿ ದೊಡ್ಡ ಮಟ್ಟದ ತಂಡ ಕಾರ್ಯನಿರ್ವಹಿಸಲಿವೆ ಎಂದು ಆಯುಕ್ತರು ವಿವರಿಸಿದರು.

ಈ ಮೂರು ತಂಡಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸುಳ್ಳು ಸುದ್ದಿಗಳನ್ನು ಕೂಡಲೇ ಪರಿಶೀಲಿಸಲಾಗುತ್ತದೆ. ಫ್ಯಾಕ್ಟ್ ಚೆಕ್ ಮಾಡಿ ಸತ್ಯಾಸತ್ಯತೆ ಜನರಿಗೆ ಮನವರಿಕೆ ಮಾಡಿಕೊಡುತ್ತವೆ. ಈಗಾಗಲೇ ಸಿಬ್ಬಂದಿಗೆ ಸುಳ್ಳು ಸುದ್ದಿಗಳನ್ನು ಯಾವ ರೀತಿ ಪತ್ತೆ ಹಚ್ಚಬೇಕು ಎಂಬ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಠಾಣಾ ಮಟ್ಟದ ತಂಡ ಸುಳ್ಳು ಸುದ್ದಿ ಹಾಗೂ ಪ್ರಚೋದನಾಕಾರಿ ಬರಹಗಳ ಬಗ್ಗೆ ಡಿಸಿಪಿ ಕಚೇರಿಯ ತಂಡಕ್ಕೆ ಮಾಹಿತಿ ನೀಡಲಿವೆ. ಆ ತಂಡ ಆಯುಕ್ತರ ಕಚೇರಿಯ ಘಟಕಕ್ಕೆ ವರದಿ ಮಾಡಲಿದೆ. ಆಯುಕ್ತರ ಕಚೇರಿಯಲ್ಲಿರುವ ಸಾಮಾಜಿಕ ಜಾಲತಾಣಗಳ ನಿಗಾ ಘಟಕದಲ್ಲಿ ನುರಿತ ಸೈಬರ್ ತಜ್ಞರು ಸಹ ಇರಲಿದ್ದು, ಇಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಸಹ ಒದಗಿಸಲಾಗಿದೆ. ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿ ನಕಲಿ ಖಾತೆಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.


Share with

Leave a Reply

Your email address will not be published. Required fields are marked *