
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳಿಗೆ ಕಲಿಕೆಯಲ್ಲಿ ಹಿಂದುಳಿದಿದ್ದಾರೆಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ ಎಂಬ ಪ್ರಕರಣದ ವಿದ್ಯಾರ್ಥಿನಿಯರು ಬುಧವಾರ ಪರೀಕ್ಷೆಗೆ ಹಾಜರಾಗಿದ್ದಾರೆ.ಶೇಕಡಾ ನೂರು ಫಲಿತಾಂಶದ ಕಾರಣಕ್ಕೆ ಕಲಿಕೆಯಲ್ಲಿ ಹಿಂದುಳಿದಿರುವ ತಮಗೆ ಅವಕಾಶ ನಿರಾಕರಿಸ ಲಾಗಿದೆ ಎಂದು ದೂರು ನೀಡಿರುವ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ವಿದ್ಯಾರ್ಥಿನಿಯರಿಬ್ಬರಿಗೂ ಪ್ರವೇಶ ಪತ್ರವನ್ನು ಒದಗಿಸಿದ್ದರು.

ಆ ಬಳಿಕವೂ ವಿದ್ಯಾರ್ಥಿ ನಿಯರು ಪರೀಕ್ಷೆ ಬರೆಯಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಸತತ ಮನವೊಲಿಸಿ ಬುಧವಾರ ಪರೀಕ್ಷೆ ಬರೆಯಲು ವಿನಂತಿಸಲಾಗಿತ್ತು. ಅದರಂತೆ ಕರಾಯ ಪ್ರೌಢ ಶಾಲೆಯಲ್ಲಿ ನಡೆದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿನಿಯರು ವಿಜ್ಞಾನ ಪರೀಕ್ಷೆಯನ್ನು ಬರೆದಿರುತ್ತಾರೆ. ಇನ್ನುಳಿದ ಒಂದು ಪರೀಕ್ಷೆಯನ್ನು ಬರೆದರೆ, ಈಗಾಗಲೇ ಪರೀಕ್ಷೆಗೆ ಹಾಜರಾಗದೆ ಉಳಿದ ನಾಲ್ಕು ಪರೀಕ್ಷೆಗಳನ್ನು ಮುಂದಿನ 2 ಹಂತಗಳಲ್ಲಿ ಬರೆಯಲು ಅವಕಾಶವಿರುತ್ತದೆ.




