ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಆಘಾತಕಾರಿ ಘಟನೆ ಆ.19ರಂದು ಮುಂಜಾನೆ ನಡೆದಿದೆ.
ಮುಂಬೈನಿಂದ ಮೆಜೆಸ್ಟಿಕ್ ನಿಲ್ದಾಣಕ್ಕೆ ಬೆಳಗ್ಗೆ 6.30 ಕ್ಕೆ ಆಗಮಿಸಿದ ರೈಲಿನಿಂದ ಎರಡು ಗಂಟೆಗಳ ಬಳಿಕ ಎಂಜಿನ್‌ನಿಂದ ಐದನೇ ಬೋಗಿಯಲ್ಲಿ ಸ್ಲೀಪರ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಬಂದಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂತರ ಬೆಂಕಿಗೆ ಗುರಿಯಾಗಿದ್ದ ಎರಡು ಬೋಗಿಗಳನ್ನು ಅಧಿಕಾರಿಗಳು ರೈಲಿನಿಂದ ಪ್ರತ್ಯೇಕಗೊಳಿಸಿದರು. ಕೆಎಸ್ಆರ್ ರೈಲು ನಿಲ್ದಾಣದ ಮೂರನೇ ಪ್ಲಾಟ್ ಫಾರಂ ನಲ್ಲಿ ಸಂಭವಿಸಿದೆ. ಸತತ ಮೂರು ಗಂಟೆಗಳ ಕರ‍್ಯಾಚರಣೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸುಟ್ಟು ಕರಕಲಾದ ಬೋಗಿಗಳನ್ನು ರೈಲ್ವೆ ಸಿಬ್ಬಂದಿ ತೆರವು ಗೊಳಿಸಿ ಪ್ಲಾಟ್ ಫಾರಂ ಸ್ವಚ್ಚಗೊಳಿಸಿದ್ದಾರೆ. ಸ್ಥಳಕ್ಕೆ ರೈಲ್ವೆ ಎಸ್ ಪಿ ಸೌಮ್ಯಲತಾ ಭೇಟಿ ನೀಡಿ ಘಟನೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.