ಸುಳ್ಯ: ರಬ್ಬರ್ ಟ್ಯಾಪಿಂಗ್ ಮಾಡಲು ತೋಟಕ್ಕೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಕಾಡುಹಂದಿ ದಾಳಿ ನಡೆಸಿ ತೀವ್ರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ದುಗಲಡ್ಕ ಕೂಟೇಲಿನಲ್ಲಿ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ಸುಳ್ಯ ತಾಲೂಕು ದುಗಲಡ್ಕ ಕೂಟೇಲು ನಿವಾಸಿ ಪದ್ಮಾವತಿ ಎಂದು ಗುರುತಿಸಲಾಗಿದೆ. ಪದ್ಮಾವತಿ ಎಂಬವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪರ್ ಆಗಿದ್ದು ಅವರು ಫೆ. 22 ರಂದು ಮುಂಜಾನೆ ದುಗಲಡ್ಕ ಘಟಕದ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವಾಗ ಪೊದೆಯಲ್ಲಿದ್ದ ಕಾಡು ಹಂದಿ ಪದ್ಮಾವತಿ ಮೇಲೆ ಏಕಾಏಕಿ ಧಾಳಿ ನಡೆಸಿತೆನ್ನಲಾಗಿದೆ. ದಾಳಿಯಿಂದ ಪಾರಾಗಲು ಓಡಿದ ಮಹಿಳೆಯನ್ನು ಬೆನ್ನಟ್ಟಿದ ಕಾಡುಹಂದಿ ಮತ್ತೊಮ್ಮ ಕಚ್ಚಿ ತೀವ್ರ ಗಾಯಗೊಳಿಸಿತೆಂದು ತಿಳಿದುಬಂದಿದೆ. ವಿಷಯ ತಿಳಿದ ಇತರ ಟ್ಯಾಪರ್ ಗಳು ಕೆ.ಎಫ್.ಡಿ.ಸಿ ಅಧಿಕಾರಿಗಳಿಗೆ ತಿಳಿಸಿದ್ದು, ಕೂಡಲೇ ಅವರು ವಾಹನ ತಂದು, ನಿಗಮದ ಸಿಬ್ಬಂದಿ ಮತ್ತು ಊರವರು, ಬಂಧುಗಳು ಸೇರಿ ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.