ಬಂಟ್ವಾಳ: ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದಡ್ಡಲ ಕಾಡು ಇಲ್ಲಿ ಅ.7 ರಂದು ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಬಂಟ್ವಾಳ ವಲಯದ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಯುತ ಬಾಲಕೃಷ್ಣ ಆಳ್ವ ಇವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಮಾತನಾಡಿ ಗ್ರಾಮ ಅಭಿವೃದ್ಧಿ ಯೋಜನೆ ಬೆಳೆದು ಬಂದ ಹಾದಿಯನ್ನು ಸ್ಮರಿಸಿದರು. ಮಕ್ಕಳ ಮನಸ್ಸಿನಲ್ಲಾಗುವ ಚಂಚಲತೆ, ಯಾವೆಲ್ಲ ರೀತಿಯಿಂದಾಗಿ ದುಶ್ಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ, ಎಂಬ ವಿಷಯಗಳ ಕುರಿತು ಮಾತನಾಡಿ “ಮಾನವ ಜನುಮ ದೊಡ್ಡದು ಅದನ್ನು ಹಾಳು ಮಾಡಬೇಡಿರಿ ಹುಚ್ಚಪ್ಪಗಳಿರ” ಎಂಬ ಮಾತಿನ ಅರ್ಥವನ್ನು ತಿಳಿಸಿದರು. ಹಾಗೂ ಈ ಸಂದರ್ಭದಲ್ಲಿ ಸಂಸ್ಥೆಯ ಬಗ್ಗೆ, ಸಂಸ್ಥೆಯ ಅಚ್ಚುಕಟ್ಟಾದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಮಾತನಾಡಿ ದುಶ್ಚಟ್ಟಾಗಳಿಗೆ ಬಲಿಯಾಗದಂತೆ ಮುಂದಿನ ವಿದ್ಯಾಭ್ಯಾಸ ಮತ್ತು ಜೀವನದ ಬಗ್ಗೆ ಆಲೋಚನೆ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ರಮಾನಂದ, ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುರುಷೋತ್ತಮ್, ಅಂಚನ್, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷರು ರೊನಾಲ್ಡ್ ಡಿಸೋಜಾ, ಭಾಸ್ಕರ್ ಕುಲಾಲ್, ದಿನೇಶ್ ಮೂಡನಡುಗೋಡು ಎ ಹಾಗೂ ಬಿ ಒಕ್ಕೂಟದ ಅಧ್ಯಕ್ಷರು, ಈ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ರಾಮಚಂದ್ರ ಕರೆಂಕಿ, ಯೋಜನೆಯ ಮೇಲ್ವಿಚಾರಕಿ ರೂಪ ಬಂಟ್ವಾಳ, ಸೇವಾ ಪ್ರತಿನಿಧಿಯಾದ ಶ್ರೀಮತಿ ಪ್ರಫುಲ್ಲ, ಸಂಸ್ಥೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು .