ಉಡುಪಿ: ಖಾಸಗಿ ಬನ್ನೊಂದು ಸೇತುವೆ ಬದಿಯ ದಂಡೆಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಕಲ್ಯಾಣಪುರ ಸೇತುವೆಯಲ್ಲಿ ಸಂಭವಿಸಿದೆ. ಬಸ್ ನದಿಯಲ್ಲಿ ಮುಳುಗುವ ಅಪಾಯವಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಬಹಳ ದೊಡ್ಡ ದುರಂತದಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಚಲಿಸುವ ಬಸ್ ಸ್ವರ್ಣ ನದಿಯ ಕಲ್ಯಾಣಪುರ ಸೇತುವೆಯ ಗರ್ಡರ್ ರಭಸದಿಂದ ಗುದ್ದಿದೆ. ಇದರ ಪರಿಣಾಮ ಸುರಕ್ಷಾ ಗರ್ಡರ್ ಮುರಿದಿದ್ದು, ಬಸ್ ಅಂಚಿನಲ್ಲಿ ನಿಂತಿದೆ. ಪ್ರಯಾಣಿಕರು ನದಿಗೆ ಬಿದ್ದು ಮುಳುಗಡೆ ಆಗುವ ಸನ್ನಿವೇಶದ ಅಪಾಯದಿಂದ ಪಾರಾಗಿದ್ದಾರೆ.
ಅದೇ ಸಮಯ ಸೇತುವೆ ಕೆಳಗಡೆ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಶಂಕರ ಎಂಬವರ ಮೇಲೆ ಸಿಮೆಂಟು ಕಂಬದ ತುಂಡು ಮುರಿದು ಬಿದ್ದಿದೆ. ಅವರ ಕೈಗೆ ಗಾಯವಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಕಲ್ಯಾಣಪುರ ಸೇತುವೆ 1963ರಲ್ಲಿ ನಿರ್ಮಾಣವಾಗಿದ್ದು 6 ದಶಕಗಳಷ್ಟು ಹಳೆಯದಾಗಿದ್ದು ಇಲ್ಲಿ ಬಹಳಷ್ಟು ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿವೆ.
ಸೇತುವೆಯ ಅಡಿಯಲ್ಲಿ ಅಲ್ಲಲ್ಲಿ ಕಾಂಕ್ರೀಟ್ ಬಿರುಕು ಬಿಟ್ಟಿದೆ. ಸೇತುವೆಯನ್ನು ಅಡಿ ಭಾಗದಲ್ಲೂ ದುರಸ್ಥಿ ಮಾಡಬೇಕಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.