ಇಸ್ರೋದ ಚಂದ್ರಯಾನ-3 ರಲ್ಲಿ ಭಾಗಿಯಾಗುವ ಮೂಲಕ ಮಾನಸ ಸುಳ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅಜ್ಜಾವರದ ಮಾನಸ ಜಯಕುಮಾರ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ಬಳಿಕ ತಾಯಿ ಕುಸುಮಾವತಿ ಮೂವರು ಹೆಣ್ಣುಮಕ್ಕಳನ್ನು ಕಷ್ಟಪಟ್ಟು ಓದಿಸಿದರು.
ಅದರಂತೆ ಪ್ರಾಥಮಿಕ ಶಿಕ್ಷಣವನ್ನು ಅಜ್ಜಾವರದಲ್ಲಿ ಪೂರೈಸಿದ ಮಾನಸ ಸುಳ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ನಂತರ ಮಂಗಳೂರು ವಿವಿಯಿಂದ ಸಾಗರ ಭೂ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ಸದ್ಯ ಪಿಹೆಚ್ ಡಿ ಅಧ್ಯಯನ ಮಾಡುತ್ತಿದ್ದಾರೆ.
ಇನ್ನು ಚಂದ್ರಯಾನ-3 ಆರಂಭವಾಗುವ ಮುನ್ನ ಸಂಶೋಧನಾ ತಂಡದ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ 900 ಮಂದಿ ಭಾಗಿಯಾಗಿದ್ದರು. ಅಂತಿಮವಾಗಿ ದಕ್ಷಿಣ ಕರ್ನಾಟಕದಿಂದ ಮಾನಸ ಆಯ್ಕೆಯಾಗಿದ್ದರು. ಚಂದ್ರಯಾನದಲ್ಲಿ ಮಾನಸ ಸಿಗ್ನಲ್ಸ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.ಆರಂಭದಲ್ಲಿ ಇಸ್ರೋದಲ್ಲಿ ತರಬೇತಿಗೆ ತೆರಳುವಾಗ ವಿಮಾನಯಾನಕ್ಕೂ ಆರ್ಥಿಕ ಸಹಾಯಕ್ಕೆ ಪರದಾಡಿದ್ದ ಮಾನಸ ಇಂದು ಎಲ್ಲರೂ ಹುಬ್ಬೇರುವಂತಹ ಸಾಧನೆ ಮಾಡಿದ್ದಾರೆ. ಪುಟ್ಟ ಕಂದಮ್ಮನ ತಾಯಿಯಾಗಿರುವ ಮಾನಸ ತನ್ನ ಈ ಸಾಧನೆಗೆ ಪತಿ ಜಯಕುಮಾರ್ ಹಾಗೂ ಕುಟುಂಬಸ್ಥರ ಸಹಕಾರವೇ ಮುಖ್ಯ ಕಾರಣ ಎಂದಿದ್ದಾರೆ.