ಮಂಜೇಶ್ವರ : ಗಡಿಪ್ರದೇಶವಾದ ತಲಪಾಡಿಯಿಂದ ಮಂಜೇಶ್ವರ ತನಕದ ರಾ. ಹೆದ್ದಾರಿಯ ಇಕ್ಕಡೆಗಳಲ್ಲೂ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಸರ್ವೀಸ್ ರಸ್ತೆಯ ಇಕ್ಕೆಡೆಗಳಲ್ಲೂ ಕಾರ್ಯಾಚರಿಸುತ್ತಿರುವ ವ್ಯಾಪಾರ ಕೇಂದ್ರಗಳಿಗೆ ವ್ಯಾಪಾರ ವಹಿವಾಟು ನಡೆಸಲು ಕಿರುಕುಳವಾಗುವ ರೀತಿಯಲ್ಲಿ ನಡೆಸುತ್ತಿರುವ ಕಾಮಗಾರಿಯನ್ನು ಯು ಎಲ್ ಸಿ ಸಿ ಅಧಿಕಾರಿಗಳು ಕೂಡಲೇ ನಿಲ್ಲಿಸಬೇಕೆಂಬ ಬೇಡಿಕೆಯೊಂದಿಗೆ ಮಂಜೇಶ್ವರ ಶಾಸಕರ ಮುಖಾಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರಾ.ಹೆದ್ದಾರಿ ಕ್ರಿಯಾ ಸಮಿತಿ ಮನವಿ ಸಲ್ಲಿಸಿದೆ.
ಖಾಸಗಿ ವ್ಯಕ್ತಿಗಳಿಂದ ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿ ಕಾಮಗಾರಿ ಆರಂಭಗೊಂಡಾಗ ವಿದ್ಯುತ್ ಕಂಬಗಳನ್ನು ಖಾಸಗಿ ವ್ಯಕ್ತಿಗಳ ಒಡೆತನದ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿರುವುದನ್ನು ತೆರವುಗೊಳಿಸಿದೆ ಕಾಲ್ನಡೆ ರಸ್ತೆಗೆ ಇಂಟರ್ ಲಾಕ್ ಹಾಕುವುದನ್ನು ನಿಲ್ಲಿಸಬೇಕೆಂದೂ ಅದೇ ರೀತಿ ಆರಾಧಾನಾಲಯ, ವಿದ್ಯಾಭ್ಯಾಸ ಕಟ್ಟಡಗಳು ಕಾರ್ಯಾಚರಿಸುತ್ತಿರುವ ಪ್ರದೇಶಗಳಲ್ಲಿ ವಾಹನ ಹಾಗೂ ಜನಸಂಚಾರಕ್ಕೆ ಅನುಕೂಲವಾಗುವ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಮಂಜೇಶ್ವರ ರಾ.ಹೆದ್ದಾರಿ ಕ್ರಿಯಾ ಸಮಿತಿ ಪ್ರಾಧಿಕಾರಕ್ಕೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದೆ.
ಕುಂಜತ್ತೂರಿನಲ್ಲಿ ತುರ್ತು ಸಭೆ ಸೇರಿದ ಕ್ರಿಯಾ ಸಮಿತಿ ಪದಾಧಿಕಾರಿಗಳು ಇಂತಹ ತೀರ್ಮಾನವನ್ನು ಕೈ ಗೊಂಡಿದ್ದಾರೆ.