ವಾಟ್ಸಪ್, ಫೇಸ್ಬುಕ್ ಸೇರಿ ಸಾಮಾಜಿಕ ಜಾಲತಾಣಗಳ ಮೇಲೆ ಮಂಗಳೂರು ನಗರ ಪೊಲೀಸರು ನಿಗಾ ಇಟ್ಟಿದ್ದಾರೆ. ಧಾರ್ಮಿಕ ಅಶಾಂತಿ ಸೃಷ್ಠಿಸುವ ಹಾಗೂ ಶಾಂತಿ ಸೌಹಾರ್ದತೆ ಕದಡುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಲು ಇಲಾಖೆ ಮುಂದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಅಶಾಂತಿ ಹಾಗೂ ಕೋಮುದ್ವೇಷ ಉಂಟಾಗುವಂತಹ ಸಂದೇಶಗಳು ರವಾನೆಯಾಗುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಈ ಕುರಿತು 21 ಪ್ರಕರಣಗಳು ದಾಖಲಾಗಿದ್ದು ಇದರ ತನಿಖೆ ನಡೆಯುತ್ತಿದೆ. ಧರ್ಮದ ವಿಚಾರವಾಗಿ ಪರ ವಿರೋಧ ಸಂದೇಶಗಳನ್ನು ರವಾನೆ ಮಾಡುತ್ತಿರುವ ವ್ಯಕ್ತಿಗಳ ಕುರಿತು ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಿಗ ವಹಿಸಲಾಗಿದೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.