ಬೆಳ್ತಂಗಡಿ: ಇಲ್ಲಿನ ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯ ಪಿಲ್ಯ ಸಮೀಪದ ಗದ್ದೆಯಲ್ಲಿ ವಾಲಿ ನಿಂತ ವಿದ್ಯುತ್ ಕಂಬದ ತಂತಿ ತಾಗಿ ಮೂರು ದನಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜೂ.28ರಂದು ನಡೆದಿದೆ. ಪಿಲ್ಯದ ಲಾರೆನ್ಸ್ ಪಿರೇರಾರವರಿಗೆ ಸೇರಿದ ದನಗಳಾಗಿದ್ದು ಗದ್ದೆಗೆ ಮೇಯಲು ಬಿಟ್ಟಿದ್ದರು ಎನ್ನಲಾಗಿದೆ. ವಿಶಾಲವಾಗಿದ್ದ ಗದ್ದೆಯಲ್ಲಿ ನೀರು ತುಂಬಿದ್ದ ಕಾರಣ ತಂತಿಗಳು ಜೋತುಬಿದ್ದಿರುವುದು ಲಾರೆನ್ಸ್ ಅವರ ಗಮನಕ್ಕೆ ಬಂದಿರಲಿಲ್ಲ. ದನಗಳು ಮೇಯುತ್ತ ವಾಲಿ ನಿಂತ ವಿದ್ಯುತ್ ಕಂಬಕ್ಕೆ ಜೋಡಿಸಿದ್ದ ತಂತಿಯನ್ನು ಸ್ಪರ್ಶಿಸಿ, ಒಂಭತ್ತು ತಿಂಗಳು ತುಂಬಿರುವ ಗಬ್ಬದ ದನ ಹಾಗೂ ಎರಡು ಕರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ತಂತಿಗಳು ಜೋತುಬಿದ್ದು ಗದ್ದೆಯ ನೀರಿಗೆ ತಾಗಿತ್ತು. ದನಗಳು ತಂತಿಯ ಹತ್ತಿರ ಬಂದ ಕೂಡಲೇ ವಿದ್ಯುತ್ ಶಾಕ್‌ಗೆ ಒಳಗಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೆಸ್ಕಾಂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಕಂದಾಯ ಇಲಾಖೆಯವರು ಭೇಟಿ ನೀಡಿದ್ದು, ಸ್ಥಳೀಯ ಪಶು ವೈದ್ಯರು ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.