ಕಾಸರಗೋಡು: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಮಂಜೇಶ್ವರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಣ್ಣೂರಿನ ರೈಫ್ ಬಷೀರ್ (31) ಬಂಧಿತ ಆರೋಪಿಯಾಗಿದ್ದು, ಜೊತೆಗಿದ್ದ ಇನ್ನೋರ್ವ ಪರಾರಿಯಾಗಿದ್ದಾನೆ. ಕರ್ನಾಟಕದಿಂದ ಒಳದಾರಿಯಾಗಿ ಮಂಜೇಶ್ವರ ಕಡೆಗೆ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಭಾನುವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಕಾರ್ಯಾಚರಣೆ ನಡೆಸಿದ ವೇಳೆ ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ಪೈವಳಿಕೆ ಸಮೀಪದ ಬಾಯಿಕಟ್ಟೆ ಬಳಿ ಕಾರಿಗೆ ಪೊಲೀಸ್ ವಾಹನ ಅಡ್ಡಗಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರನ್ನು ತಪಾಸಣೆ ನಡೆಸುವ ಮಧ್ಯೆ ಓರ್ವ ಪರಾರಿಯಾಗಿದ್ದು ಇನ್ನೋರ್ವನನ್ನು ಬಂಧಿಸಲಾಗಿದೆ. ಕಾರಿನ ಡಿಕ್ಕಿ ಹಾಗೂ ಹಿಂಬದಿ ಸೀಟಿನಡಿ ಬಾಕ್ಸ್ ಗಳಲ್ಲಿ ಸುಮಾರು 90 ಕಿಲೋ ಗಾಂಜಾವನ್ನು ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು. ಜಿಲ್ಲೆಯ ವಿವಿಧೆಡೆಗಳಲ್ಲಿ ಮಾರಾಟ ಮಾಡಲು ತಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.