ಉಡುಪಿ: ಕರಾವಳಿಯಾದ್ಯಂತ ಕಳೆದ ನಾಲೈದು ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು, ನದಿ, ತೋಡು ಮತ್ತು ಗದ್ದೆಗಳಲ್ಲಿ ನೀರು ಸರಾಗವಾಗಿ ಹರಿಯಲಾರಂಭಿಸಿದೆ. ಈ ನಡುವೆ ಸಾಂಪ್ರದಾಯಿಕ ಉಬರ್ ಫಿಶಿಂಗ್ ಕೂಡ ಜೋರಾಗಿ ನಡೆಯುತ್ತಿದೆ.
ಕಾಪು ತಾಲೂಕಿನ ಶಂಕರಪುರ ಕಟಪಾಡಿ ಪಾಂಗಾಳ. ಇನ್ನಂಜೆ, ಕುರ್ಕಾಲು, ಮಣಿಪುರ ಸಹಿತ ವಿವಿಧೆಡೆಗಳಲ್ಲಿನ ಪ್ರದೇಶಗಳ ಗದ್ದೆಗಳಲ್ಲಿ ಮತ್ತು ತೋಡುಗಳ ಬದಿಯಲ್ಲಿ ಕಳೆದ ಎರಡು ದಿನಗಳಿಂದ ಉಬರ್ ಮೀನುಗಾರಿಕೆ ಅಬ್ಬರ ಜೋರಾಗಿದೆ.
ಸಾಮಾನ್ಯವಾಗಿ ಏಡಿಗಳು ಹತ್ತಾರು ಅಡಿಗಳಷ್ಟು ಆಳದ ಬಿಲ ಕೊರೆದು ಅವುಗಳಲ್ಲಿ ಸುರಕ್ಷಿತವಾಗಿರುತ್ತವೆ. ಮೀನುಗಳು ಗಟ್ಟಿ ಕೆಸರಿನಲ್ಲಿ ಅವಿತು ಕುಳಿತಿರುತ್ತವೆ. ಮೊದಲ ಮಳೆ ಬೀಳುತ್ತಿದ್ದಂತೆ ಮೊಟ್ಟೆಯಿಡಲು ಸುರಕ್ಷಿತ ಜಾಗ ಹುಡುಕಿಕೊಂಡು ನೀರು ಕಡಿಮೆ ಇರುವ ಬಯಲು ಪ್ರದೇಶ, ಗದ್ದೆಗಳಿಗೆ ಮತ್ತು ಸಮತಟ್ಟು ಪ್ರದೇಶಗಳತ್ತ ಬಂದು ಮೊಟ್ಟೆ ಇಡುತ್ತವೆ. ಆದ್ದರಿಂದ ಗದ್ದೆ ಪ್ರದೇಶದಲ್ಲಿ ಹೆಚ್ಚಾಗಿ ಈ ಮೀನುಗಳು ಕಾಣಸಿಗುತ್ತವೆ. ಮೀನು ಹಿಡಿಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿವೆ.