ಉಡುಪಿ: ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆ ಮಾಚಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಲು ಹೊರಟಿದೆ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಕುಂಜಿಬೆಟ್ಟುವಿನ ಶಾರದ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಫೆ.6ರಂದು ನಡೆದ ಉಡುಪಿ ಜಿಲ್ಲಾ ಬಿಜೆಪಿಯ ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿ ಅದರ ಅನುಷ್ಟಾನದಲ್ಲಿ ವೈಫಲ್ಯ ಕಂಡಿದೆ. ಈ ವೈಫಲ್ಯವನ್ನು ಮರೆ ಮಾಚಲು ಇದೀಗ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲು ಹೊರಟಿದೆ. ಯುಪಿಎ ಸರಕಾರದ ಅವಧಿಯಲ್ಲಿ ರಾಜ್ಯ ಸಿಕ್ಕ ಅನುದಾನಕ್ಕಿಂತ ಎರಡು ಪಟ್ಟು ಹೆಚ್ಚಿನ ಅನುದಾನ ಈಗಿನ ಮೋದಿ ನೇತೃತ್ವದ ಕೇಂದ್ರ ಸರಕಾರ ನೀಡಿದೆ ಎಂದರು.
ಕಾರ್ಯಕಾರಣಿ ಸಭೆಯನ್ನು ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಶಾಸಕ ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿವಿ, ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಾಜಿ ಅದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಹೆರ್ಗ ದಿನಕರ ಶೆಟ್ಟಿ ಸ್ವಾಗತಿಸಿದರು.