ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ಉಡುಪಿ ಜಿಲ್ಲೆಯ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಜೀವನದಿ ಸ್ವರ್ಣೆಯೂ ಬಿಸಿಲಿನ ತಾಪಕ್ಕೆ ಬಸವಳಿದಿದ್ದು ಒಳಹರಿವು ಕ್ಷೀಣಿಸುತ್ತಿದೆ. ಹೀಗಾಗಿ ಜಿಲ್ಲೆಯ ಪ್ರಮುಖ ಅಣೆಕಟ್ಟಾಗಿರುವ ಬಜೆ ಡ್ಯಾಂನಲ್ಲಿ ನೀರಿನ ಸಂಗ್ರಹಣಾ ಮಟ್ಟವೂ ತಗ್ಗುತ್ತಿದೆ. ಇದು ನಗರಸಭೆಗೆ ತಲೆನೋವಾಗಿ ಪರಿಣಮಿಸಿದೆ.
ಬಿಸಿಲ ಬೇಗೆಯು ತೀವ್ರವಾಗಿದ್ದು, ನಗರಸಭೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರ್ಚ್ ಆರಂಭದಲ್ಲಿಯೇ ನೀರಿನ ಬೇಡಿಕೆ ಹೆಚ್ಚಿರುವುದು ನಗರಸಭೆಯ ಕಳವಳಕ್ಕೆ ಕಾರಣವಾಗಿದೆ. ಉಡುಪಿ ನಗರಸಭೆಯಿಂದ ಕುಡಿಯುವ ನೀರಿನ ಸಂಪರ್ಕ ಪಡೆದಿರುವ ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾದ ಬಳಕೆಗೆ ಆದ್ಯತೆ ನೀಡಿ, ನೀರಿನ ಅಭಾವ ಇರುವ ಈ ಸಮಯದಲ್ಲಿ ನಗರಸಭೆಯೊಂದಿಗೆ ಜನತೆ ಸಹಕರಿಸುವಂತೆ ನಗರಸಭೆಯ ಪೌರಾಯುಕ್ತರು ಮನವಿ ಮಾಡಿದ್ದಾರೆ.