ಬೆಳ್ತಂಗಡಿ: ಪಾಲಿಟೆಕ್ನಿಕ್ ವಿದ್ಯಾರ್ಥಿಗಳಲ್ಲಿ ಕೌಶಲ್ಯಧಾರಿತ ವಿದ್ಯೆಯ ಜತೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸುವ ಉದ್ದೇಶದಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಮಟ್ಟದ ಪಾಲಿಟೆಕ್ನಿಕ್ ಪುರುಷ ವಿದ್ಯಾರ್ಥಿಗಳಿಗೆ ವಾಲಿಬಾಲ್ ಪಂದ್ಯಾಟ ಅ.4ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ ನಡೆಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿಯ ವಿದ್ಯಾರ್ಥಿಗಳನ್ನು ದಾಖಲೆಯ 9ನೇ ಬಾರಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿದ ವಿಶೇಷ ಸಾಧಕ, ವಾಲಿಬಾಲ್ ಕೋಚ್ ಪ್ರಶಾಂತ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಕ್ರೀಡೆ ಜೀವನದಲ್ಲಿ ಅವಶ್ಯಕವಾದ ಭಾಗ. ಆರೋಗ್ಯ ಹದಗೆಟ್ಟಿರುವ ಸಮುದಾಯದಲ್ಲಿ ಕ್ರೀಡೆ ಸಹಕಾರಿ.
ಸದೃಢ ದೇಹದಲ್ಲಿ ಕ್ರೀಡೆ ಭಾವನಾತ್ಮಕ, ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲಿ ಉತ್ಕೃಷ್ಟ ಸ್ಥಾನದಲ್ಲಿದೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ, ಕ್ರೀಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಗರೋಪಾದಿಯಲ್ಲಿ ಕೊಡುಗೆ ನೀಡಿದೆ. ಕ್ರೀಡೆ ಪೈಪೋಟಿಯುತ ಜೀವನದ ನಡೆಗೂ ಒಂದು ರಹದಾರಿ. ಕ್ರೀಡೆಯನ್ನು ಸ್ಪರ್ಧಾತ್ಮಕವಾಗಿ ನೋಡಿ, ಜೀವನ ಅನುಭವವನ್ನಾಗಿಸಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಸಂತೋಷ್ ಅವರು, ಕ್ರೀಡಾ ಕೂಟ ಪ್ರೋತ್ಸಾಹ ನೆಲೆಯಲ್ಲಿ ಎಸ್.ಡಿ.ಎಂ.ಟ್ರಸ್ಟ್ ಅತ್ಯುತ್ತಮ ಸಹಕಾರ ನೀಡುತ್ತಾ ಬಂದಿದೆ. ಪ್ರಸಕ್ತ ಉಭಯ ಜಿಲ್ಲೆಯ ಕಾಲೇಜುಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಮುಂದೆ ರಾಜ್ಯದ ಎಲ್ಲ ಜಿಲ್ಲೆಗಳೊಡಗೂಡಿ ಕಬಡ್ಡಿ, ವಾಲಿಬಾಲ್ ಆಯೋಜನೆ ಬಗ್ಗೆ ಚಿಂತಿಸಲಾಗುತ್ತಿದೆ. ಪ್ರಸಕ್ತ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 15 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಎಸ್.ಡಿ.ಎಂ. ಕ್ರೀಡಾ ನಿರ್ದೇಶಕ ರಮೇಶ್ ಎಂ., ಕಾಲೇಜು ವ್ಯವಸ್ಥಾಪಕ ಚಂದ್ರನಾಥ್ ಜೈನ್, ಪಾಲಿಟೆಕ್ನಿಕ್ ಕ್ರೀಡಾ ನಿರ್ದೇಶಕ ನಿತಿನ್ ಪೂಜಾರಿ ಉಪಸ್ಥಿತರಿದ್ದರು.
ಉಪನ್ಯಾಸಕ ನಿಖಿತ್ ಸ್ವಾಗತಿಸಿದರು. ವಿದ್ಯಾರ್ಥಿ ಪ್ರಮೀತ್ ಪ್ರಾಸ್ತಾವಿಸಿದರು. ಉಪನ್ಯಾಸಕ ಸಂಪತ್ ಕುಮಾರ್ ಜೈನ್ ನಿರ್ವಹಿಸಿದರು. ಮಿಥುನ್ ಜೈನ್ ವಂದಿಸಿದರು.