ತುಳುನಾಡಿನ ʼಆಟಿಅಮವಾಸ್ಯೆʼಯ ವಿಶೇಷತೆ ಏನು? ಸರ್ವರೋಗಕ್ಕೂ ರಾಮಬಾಣ ಆಟಿ ಕಷಾಯ..

Share with

ಆಟಿ ಕಷಾಯ

ಆಟಿ ಅಮಾವಾಸ್ಯೆ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಆಚರಿಸುವ ಅಮವಾಸ್ಯೆಯಾಗಿದೆ. ಈ ಅಮಾವಾಸ್ಯೆಯನ್ನು ಆಷಾಡ ಅಮಾಸೆ , ದೀವಿಗೆ ಕರ್ನಾಟಕ ಅಮಾವಾಸ್ಯೆ ಅಥವಾ ಭೀಮನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆಟಿ ತಿಂಗಳಲ್ಲಿ ಬರುವ ಈ ಅಮಾವಸ್ಯೆಯು ತುಳುವ ಜನರಿಗೆ ವಿಶೇಷವಾದ ದಿನ ಹಾಗೂ ಇದು ಹಿಂದಿನಿಂದಲೂ ಆಚರಿಸುತ್ತಾ ಬಂದಿರುವ ಆಚರಣೆಯಾಗಿದೆ. ಈ ದಿನದಂದು ತುಳುನಾಡ ಜನರು ಪಾಲೆ ಮರದ ತೊಗಟೆಯನ್ನು ಕೆತ್ತಿ ಅದರಿಂದ ಕಷಾಯ/ಮದ್ದನ್ನು ತಯಾರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ತುಳುನಾಡಿನಲ್ಲಿ ಆಟಿ ಎಂಬುದು ಒಂದು ತಿಂಗಳಿನ ಹೆಸರಾಗಿದೆ.

ಆಟಿ ತಿಂಗಳನ್ನು ಅನಿಷ್ಟ ತಿಂಗಳೆಂದೂ ಕರೆಯುತ್ತಾರೆ. ಏಕೆಂದರೆ, ಆಟಿ ತಿಂಗಳಲ್ಲಿ ಕ್ರಿಮಿಕೀಟಗಳ ತೊಂದರೆ ಅಧಿಕವಾಗಿರುವುದರ ಜೊತೆಗೆ ಅಧಿಕವಾದ ಮಳೆಯೂ ಇರುತ್ತದೆ. ಈ ಸಂದರ್ಭದಲ್ಲಿ ಮನೆಬಿಟ್ಟು ಹೊರಹೋಗಲಾಗುವುದಿಲ್ಲ. ಹೀಗಾಗಿ ಆಟಿ ತಿಂಗಳನ್ನು ಅನಿಷ್ಟವೆಂದು ಕರೆಯುತ್ತಾರೆ. ಈ ಅನಿಷ್ಟಗಳನ್ನೆಲ್ಲ ಕಳೆಯಲು ಆಟಿ ಕಳಂಜೆ ಬರುತ್ತಾನೆ ಎಂಬ ವಾಡಿಕೆ ತುಳುನಾಡಿನಲ್ಲಿದೆ. ಆಟಿ ಅತ್ಯಂತ ಹಳೆಯ ಸಾಂಪ್ರದಾಯಿಕ ಭಾರತೀಯ ಸೌರ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳಾಗಿದೆ. ಈ ದಿನದಂದು ಕಹಿ ರುಚಿಯ ಪಾಲೆ ಮರದ ಕಷಾಯವನ್ನು ಕುಡಿಯುವುದರಿಂದ ಅನಾರೋಗ್ಯವು ಕಮ್ಮಿಯಾಗುತ್ತದೆ ಹಾಗೂ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ರೋಗಳ ವಿರುದ್ಧ ಹೋರಾಡಲು ಔಷಧೀಯ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಪಾಲೆದ ಕಷಾಯ ಸೇವಿಸಿದಾಗ ಅದರ ಸಂಪೂರ್ಣ ಉಪಯೋಗವಾಗುವುದು.

ಹಾಳೆ ಮರದ ತೊಗಟೆಯ ತಯಾರಿ ಹೇಗೆ:

ಮನೆಯ ಯಜಮಾನ ಅಮವಾಸ್ಯೆಯ ಹಿಂದಿನ ದಿನ ಹಾಲೆ ಮರಕ್ಕೆ ಏನಾದರೂ ಗುರುತನ್ನು ನೀಡಿ ಬರುತ್ತಾರೆ. ಮರುದಿನ ಅಂದರೆ ಆಟೀ ಅಮಾವಸ್ಯೆಯ ದಿನದಂದು ಸೂರ್ಯೋದಯಕ್ಕೂ ಮುನ್ನ ಪಾಲೆಮರದ ಬುಡಕ್ಕೆ ತೆರಳಿ ಕೈಯಲ್ಲೊಂದು ಪೊರಕೆ ಹಿಡಿದು ಮರಕ್ಕೆ ಸುತ್ತು ಬಂದು ಅದರಿಂದ ಮರಕ್ಕೆ ಮೂರು ಪೆಟ್ಟು ಕೊಟ್ಟು, ನಂತರ ಮರದ ಕೆತ್ತೆಯನ್ನುಕಲ್ಲಿನಿಂದ ಗುದ್ದಿ ತೆಗೆಯಬೇಕು. ಹಾಗೆ ಕಲ್ಲಿನಿಂದ ಗುದ್ದುವಾಗ ಪಾಲೆಮರವು ಬೀಲಯ ಹಾಲನ್ನು ಬಿಡುತ್ತದೆ. ಮರವನ್ನು ಹೀಗೆ ಕಲ್ಲಿನಲ್ಲಿ ಗುದ್ದುವಾಗ ಅದರ ಚರ್ಮವು ಬಿಡಿಬಿಡಿಯಾಗಿ(ತುಳುವಿನಲ್ಲಿ ಪಾಲೆ ಪಾಲೆಯಾಗಿ) ಏಳುವುದರಿಂದ ಈ ಮರಕ್ಕೆ ತುಳು ಭಾಷೆಯಲ್ಲಿ ಪಾಲೆ ಮರ ಎಂಬ ಹೆಸರು ಬಂತು.

ಕಷಾಯ ತಯಾರಿಸುವ ವಿಧಾನ:

ಮರದ ತೊಗಟೆಯನ್ನು ಕಲ್ಲು ಬಳಸಿ ಪುಡಿಮಾಡಲಾಗುತ್ತದೆ. ಬಳಿಕ ಈ ಆಯುರ್ವೇದದ ಮಿಶ್ರಣಕ್ಕೆ ಕಾಳುಮೆಣಸು, ಅರಿಶಿನ, ಅಜವೈನ್, ಬೆಳ್ಳುಳ್ಳಿ ಮತ್ತು ಬೀಜಗಳ ಪದಾರ್ಥಗಳನ್ನು ಮಿಶ್ರಣ ಮಾಡಿ ಒಂದು ಬೆಣಚುಕಲ್ಲು ಅಥವಾ ಕಬ್ಬಿಣದ ಬಾರ್ ಅನ್ನು ಬಿಸಿಮಾಡಿ ಕಷಾಯದಲ್ಲಿ ಇರಿಸಿ ನಂತರ ಚೆನ್ನಾಗಿ ಕುದಿಸಿ ತಯಾರು ಮಾಡುತ್ತಾರೆ. ಮೊದಲು ದೇವರಿಗೆ ಅರ್ಪಣೆ ಮಾಡಿ, ಬಳಿಕ ಮನೆಯವರೆಲ್ಲರೂ ಕಷಾಯವನ್ನು ಕುಡಿಯುತ್ತಾರೆ. ಇದು ಸಮಗ್ರ ಔಷಧೀಯಗುಣಗಳನ್ನು ಹೊಂದಿರುವುದರಿಂದ ಹೆಚ್ಚು ಕಹಿ ರುಚಿಯನ್ನು ಹೊಂದಿರುತ್ತದೆ.

ಕಷಾಯವನ್ನು ಸೇವಿಸಿದ ನಂತರ, ಹುರಿದ ಗೋಡಂಬಿ, ಪಪ್ಪಡ್ ಮತ್ತು ತೆಂಗಿನಕಾಯಿ ಅನ್ನದ ಜೊತೆಗೆ ಈ ಔಷಧಿಯು ಜೀವಕ್ಕೆ ಉಷ್ಣವಾಗಬಾರದೆಂದು ಮೆಂತೆ ಗಂಜಿಯನ್ನು ತಿನ್ನುವ ಅಭ್ಯಾಸವಿದೆ.

ಕಷಾಯದ ಉಪಯೋಗಗಳೇನು?:

ಹೊಟ್ಟೆಯ ಕಾಯಿಲೆ ಹಾಗೂ ಹುಳುವಿನ ಸಮಸ್ಯೆ ಸೇರಿದಂತೆ,ಅತಿಸಾರ, ಮಲೇರಿಯಾ, ಅಸ್ತಮಾ, ಅಪಸ್ಮಾರ, ಸಂಧಿವಾತ, ಚರ್ಮ ರೋಗಗಳು, ಹೊಟ್ಟೆನೋವು, ಪ್ರತಿಬಂಧಕ ಕಾಮಾಲೆ, ಜ್ವರ ಸ್ತ್ರೀರೋಗದಂತಹ ಸಮಸ್ಯೆಗಳ ನಿವಾರಣೆಗೆ ಈ ಮರವನ್ನು ಬಳಸಲಾಗುತ್ತದೆ. ಇದರ ತೊಗಟೆಯ ಪೇಸ್ಟನ್ನು ದೀರ್ಘಕಾಲದ ಚರ್ಮದ ಹುಣ್ಣುಗಳಿಗೆ ಹಚ್ಚಲು ಹಗೂ ಬಾಣಂತಿಯಲ್ಲಿರುವ ಹೆಂಗಸರಿಗೆ ತಮ್ಮ ಎದೆಹಾಲನ್ನು ಹೆಚ್ಚಿಸಲು ಪ್ರಸವಾನಂತರದ ಸಮಯದಲ್ಲಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಇದು ಜೀರ್ಣಕಾರಿ ಶಕ್ತಿಯನ್ನೂ ಸಹ ಹೆಚ್ಚಿಸುತ್ತದೆ. ಪಾಲೆಮರದ ತಾಜಾ ತೊಗಟೆಯ ಕಷಾಯವನ್ನು ಕುಡಿಯುವುದರಿಂದ ಬೊಜ್ಜು, ಹೈಪರ್‌ ಕೊಲೆಸ್ಟ್ರಾಲ್ ಸಮಸ್ಯೆಗಳು ದೂರವಾಗುತ್ತವೆ.


Share with

Leave a Reply

Your email address will not be published. Required fields are marked *