ಬೆಳ್ತಂಗಡಿ ತಾಲೂಕಿನ ಹಲವೆಡೆ ನಿರಂತರ ದಾಳಿ ನಡೆಸುತ್ತಿರುವ ಕಾಡಾನೆಗಳು! ಬೇಸತ್ತ ಗ್ರಾಮಸ್ಥರು!

Share with

ಕಾಡಾನೆಗಳು ದಾಳಿ ನಡೆಸಿ ಕೃಷಿ ನಾಶ ಉಂಟು ಮಾಡುತ್ತಿರುವುದು ಪ್ರತಿದಿನ ಎಂಬಂತೆ ನಡೆಯುತ್ತಿದೆ.

ಬೆಳ್ತಂಗಡಿ: ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಕೃಷಿ ನಾಶ ಉಂಟು ಮಾಡುತ್ತಿರುವುದು ಪ್ರತಿದಿನ ನಡೆಯುತ್ತಿದ್ದು ಕೃಷಿಕರಲ್ಲಿ ಕಾಡಾನೆಗಳ ಹಾವಳಿಯ ಆತಂಕ ಹೆಚ್ಚಿದೆ.

ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಹಾನಿ ಉಂಟು ಮಾಡುತ್ತಿವೆ.
ಹೆದ್ದಾರಿ ಸಮೀಪ ಇರುವ ಅರಣ್ಯ ಇಲಾಖೆಯ ನರ್ಸರಿ ಸಹಿತ ಕೃಷಿ ತೋಟಗಳಿಗೂ ಆನೆಗಳು ದಾಳಿ ನಡೆಸುತ್ತಿವೆ.

ಕಳೆದ ಸುಮಾರು ಒಂದು ತಿಂಗಳಿನಿಂದ ತಾಲೂಕಿನ ಧರ್ಮಸ್ಥಳ, ತೋಟತ್ತಾಡಿ, ಚಿಬಿದ್ರೆ, ಮುಂಡಾಜೆ, ಚಾರ್ಮಾಡಿ, ಕಡಿರುದ್ಯಾವರ, ಶಿಶಿಲ, ಶಿಬಾಜೆ, ಹತ್ಯಡ್ಕ ನಿಡ್ಲೆ ಮೊದಲಾದ ಗ್ರಾಮಗಳಲ್ಲಿ ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಹಾನಿ ಉಂಟು ಮಾಡುತ್ತಿವೆ.

ಕಾಡಾನೆಗಳು ಜನ ವಸತಿ ಪ್ರದೇಶಗಳ ಕಡೆಗೂ ಬರುತ್ತಿದ್ದು ಹಗಲಲ್ಲೂ ಜನರಿಗೆ ಕಾಣಿಸಿಗುತ್ತಿದೆ. ಆನೆಗಳು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ದಾಂಗುಡಿ ಇಡುತ್ತಿವೆ. ಹೆದ್ದಾರಿ ಸಮೀಪ ಇರುವ ಅರಣ್ಯ ಇಲಾಖೆಯ ನರ್ಸರಿ ಸಹಿತ ಕೃಷಿ ತೋಟಗಳಿಗೂ ಆನೆಗಳು ಯಾವುದೇ ಎಗ್ಗಿಲ್ಲದೆ ದಾಳಿ ನಡೆಸುತ್ತಿವೆ. ಆನೆಗಳ ಉಪಟಳ ಕೃಷಿಕರ ನಿದ್ದೆಗೆಡಿಸುತ್ತಿದೆ.

ಚಿಬಿದ್ರೆ ಗ್ರಾಮದ ಮದರ ಬೆಟ್ಟು ಶ್ರೀನಿವಾಸ ಹೆಬ್ಬಾರ್ ಅವರ ತೋಟಕ್ಕೆ ಕಳೆದ ವಾರ ಎರಡು ಬಾರಿ ಕಾಡಾನೆಗಳು ದಾಳಿ ಇಟ್ಟಿವೆ. ಮನೆಯವರು ಹೊರ ಜಿಲ್ಲೆಗೆ ತೆರಳಿದ್ದ ಕಾರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೊದಲಿಗೆ ತೋಟಕ್ಕೆ ಆಗಮಿಸಿದ ಒಂಟಿ ಸಲಗ ತೋಟವಿಡಿ ತಿರುಗಾಟ ನಡೆಸಿ ಮನೆ ತನಕ ಆಗಮಿಸಿದ್ದರೂ ಕೃಷಿಹಾನಿ ಉಂಟುಮಾಡಿರಲಿಲ್ಲ. ಆದರೆ ಎರಡು ದಿನಗಳ ಬಳಿಕ ಇವರ ತೋಟಕ್ಕೆ ದಾಳಿ ಇಟ್ಟ ಕಾಡಾನೆಗಳ ಹಿಂಡು 100ಕ್ಕಿಂತ ಅಧಿಕ ಅಡಕೆ ಮರ, 7 ತೆಂಗು ಹಾಗೂ 50 ಬಾಳೆ ಗಿಡಗಳನ್ನು ನಾಶ ಮಾಡಿವೆ.

10ರಿಂದ 15ಕಾಡಾನೆ ಇರುವ ಸಾಧ್ಯತೆ:
ತಾಲೂಕಿನ ನಾನಾ ಪರಿಸರಗಳಲ್ಲಿ 10ರಿಂದ 15 ಕಾಡಾನೆಗಳು ಇರುವ ಶಂಕೆ ವ್ಯಕ್ತವಾಗುತ್ತಿದೆ. ಇದರಲ್ಲಿ ಎರಡು ಮರಿಯಾನೆಗಳ ಸಹಿತ ಎಂಟರಿಂದ ಹತ್ತು ಕಾಡಾನೆಗಳು ಚಾರ್ಮಾಡಿ ಭಾಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ತಿರುಗಾಟ ನಡೆಸಿರುವುದು ಸ್ಥಳೀಯರು ಕಂಡಿದ್ದಾರೆ. ಇನ್ನೊಂದೆಡೆ ಒಂದು ಮರಿಯಾನೆ ಸಹಿತ 3 ಆನೆಗಳು ಧರ್ಮಸ್ಥಳದ ನೇರ್ತನೆ, ಮುಂಡಾಜೆ, ಕಡಿರುದ್ಯಾವರ, ಚಿಬಿದ್ರೆ ಮೊದಲಾದ ಪ್ರದೇಶಗಳಲ್ಲಿ ತಿರುಗಾಟ ನಡೆಸುತ್ತಿವೆ. ಇದು ಚಾರ್ಮಾಡಿಯಲ್ಲಿ ಕಂಡು ಬಂದ ಕಾಡಾನೆಗಳ ಗುಂಪಿನಿಂದ ಬೇರ್ಪಟ್ಟ ಹಿಂಡು ಅಥವಾ ಇದೊಂದು ಬೇರೆ ಗುಂಪಾಗಿರಬಹುದೇ ಎಂಬ ಅನುಮಾನವೂ ಇದೆ. ಅಲ್ಲದೆ ಈ ಭಾಗದಲ್ಲಿ ಎರಡು ಬೇರೆ ಬೇರೆ ಒಂಟಿ ಸಲಗಗಳು ಆಗಾಗ ಕಂಡು ಬರುತ್ತಿವೆ. ಹೀಗೆ ತಾಲೂಕಿನ ಈ ಭಾಗಗಳಲ್ಲಿ ಸುಮಾರು 15ರಷ್ಟು ಕಾಡಾನೆಗಳು ಇರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಹೆದರದ ಆನೆಗಳು:
ಹಿಂದೆ ಪಟಾಕಿ ಸಿಡಿಸಿ, ಬೆಂಕಿ ಹಾಕಿದರೆ ಓಡುತ್ತಿದ್ದ ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ಇದಕ್ಕೂ ಬಗ್ಗುತ್ತಿಲ್ಲ. ಒಮ್ಮೆ ಓಡಿದರು ಮತ್ತೆ ಅದೇ ಪ್ರದೇಶಕ್ಕೆ ಬರುತ್ತವೆ.

ಸಿಬ್ಬಂದಿ ಕೊರತೆ:
ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿ, ಅರಣ್ಯ ವೀಕ್ಷಕ, ಅರಣ್ಯ ರಕ್ಷಕರ ಕೊರತೆಯು ಹೆಚ್ಚಿನ ಪ್ರಮಾಣದಲ್ಲಿದೆ. ಇಲಾಖೆ ನೀಡುವ ಕೆಲಸಗಳನ್ನು ಪೂರ್ತಿಗೊಳಿಸಲು ಇರುವ ಸಿಬ್ಬಂದಿ ಹರಸಾಹಸ ನಡೆಸುತ್ತಿದ್ದಾರೆ. ಇದರ ಜತೆ ಕಾಡಾನೆಗಳ ಹಾವಳಿ, ಪರಿಶೀಲನೆ, ಗಸ್ತು ಇತ್ಯಾದಿ ಜವಾಬ್ದಾರಿ ಕೂಡ ಇವರ ಹೆಗಲ ಮೇಲಿದೆ ಇರುವ ಸಿಬ್ಬಂದಿ ಅಹರ್ನಿಶಿ ಕರ್ತವ್ಯ ನಿರ್ವಹಿಸುತ್ತಾ ಹೈರಾಣರಾಗುತ್ತಿದ್ದಾರೆ. ಇಲಾಖೆಯಲ್ಲಿ ಅಗತ್ಯ ಬೇಕಾದ ಸಲಕರಣೆ ವಸ್ತುಗಳು ಇಲ್ಲದಿರುವುದು ಆನೆ ಓಡಿಸಲು ಹಿನ್ನಡೆಯಾಗುತ್ತಿದೆ. ಇಲಾಖೆಯು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ಕಾಡಾನೆಗಳನ್ನು ಓಡಿಸಲು ಅಗತ್ಯ ಇರುವ ಸಲಕರಣೆಗಳನ್ನು ಒದಗಿಸುವತ್ತ ಗಮನಹರಿಸಿದರೆ ಕಾಡಾನೆಗಳ ಹಾವಳಿಯನ್ನು ಒಂದಿಷ್ಟು ತಡೆಗಟ್ಟಲು ಸಾಧ್ಯವಿದೆ.

ಸೋಲಾರ್ ಬೇಲಿ:
ಕಾಡಾನೆಗಳ ಹಾವಳಿಯನ್ನು ಕೃಷಿ ಭೂಮಿಯ ಸುತ್ತ ಸೋಲಾರ್ ಬೇಲಿ ನಿರ್ಮಿಸಿ ತಡೆಗಟ್ಟಬಹುದು. ಆದರೆ ಇದನ್ನು ಒಂದು ಕೃಷಿ ಭೂಮಿಗೆ ನಿರ್ಮಿಸುವ ಬದಲು ಸುತ್ತಲ ಪ್ರದೇಶದವರು ಒಟ್ಟಾಗಿ ನಿರ್ಮಿಸಿದರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಸೋಲಾರ್ ಬೇಲಿ ನಿರ್ಮಿಸಿದ ಕೆಲವು ಪ್ರದೇಶಗಳಲ್ಲಿ ಆನೆ ಹಾವಳಿ ಕಂಡು ಬರದೆ ಇರುವುದರಿಂದ ಇದು ಕಾಡಾನೆ ಹಾವಳಿ ತಡೆಗೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.


Share with

Leave a Reply

Your email address will not be published. Required fields are marked *