ಮಂಗಳೂರು-ಕಲಬುರಗಿ ವಿಮಾನ ಸಂಚಾರದ ಬಗ್ಗೆ ಚರ್ಚಿಸುವೆ: ಶೋಭಾ ಕರಂದ್ಲಾಜೆ

Share with

ಮಹೇಶ್ ಚಿಲ್ಕಾ ಅವರು ಕಲಬುರಗಿ ವಿಮಾನ ನಿಲ್ದಾಣದ ಸೌಲಭ್ಯ ಮತ್ತು ಸಾಧ್ಯತೆಗಳ ಕುರಿತ ಪ್ರಸ್ತಾಪದ ಪತ್ರವನ್ನು ಸಚಿವೆ ಶೋಭಾ ಕರಂದ್ಲಾಜೆಯವರಿಗೆ ನೀಡಿದರು.

ಕಲಬುರಗಿ: ಮಂಗಳೂರಿನಿಂದ ಕಲಬುರಗಿ ಸಂಚರಿಸಲು ಅನಾನುಕೂಲವಿರುವುದರಿಂದ ವಿಮಾನ ಸೇವಾ ಸೌಲಭ್ಯ ಅತ್ಯಗತ್ಯವಾಗಿದ್ದು ಕೇಂದ್ರ ಸರಕಾರವು ವಿಮಾನ ಸಾರಿಗೆ ಪ್ರಾರಂಭಕ್ಕೆ ಬದ್ಧವಾಗಿದ್ದು ಕೂಡಲೇ ಕೇಂದ್ರ ವಿಮಾನಯಾನ ಖಾತೆಯ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಜೊತೆ ಚರ್ಚಿಸುವುದಾಗಿ ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೇಳಿದರು.

ಕಲಬುರಗಿಯ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ| ಸದಾನಂದ ಪೆರ್ಲ ಅವರ ನೇತೃತ್ವದಲ್ಲಿ ನಿಯೋಗ ತೆರಳಿ ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಅವರು ಕಲಬುರಗಿ ವಿಮಾನ ನಿಲ್ದಾಣವು ನೈಟ್ ಲ್ಯಾಂಡಿಂಗ್ ಸೌಲಭ್ಯವನ್ನು ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಖಾಸಗಿ ವಿಮಾನ ಸಂಸ್ಥೆಗಳ ಜೊತೆ ನಾಗರಿಕ ವಿಮಾನಯಾನ ಇಲಾಖೆ ಚರ್ಚಿಸಿ ಕಲಬುರಗಿಯಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಮಾನ ಸಂಚಾರ ಪ್ರಾರಂಭಿಸಲು ತಕ್ಷಣ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.

ಈಗಾಗಲೇ ಮಂಗಳೂರು–ಹುಬ್ಬಳ್ಳಿ ನಡುವೆ ವಿಮಾನ ಸಂಚಾರ ಪ್ರಾರಂಭವಾಗಿದ್ದರೂ ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಂಡಿದೆ. ಆದರೆ ಕಲಬುರಗಿಯಿಂದ ಬೆಂಗಳೂರು ದಾರಿಯಾಗಿ ಮಂಗಳೂರಿಗೆ ವಿಮಾನ ಸಂಚಾರ ಪ್ರಾರಂಭಿಸಿದರೆ ವಿಮಾನ ಯಾತ್ರಿಕರ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು. ಕರಾವಳಿಯ ಶಿಕ್ಷಣ ಸಂಸ್ಥೆ, ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ಕೇಂದ್ರಗಳಿಗೆ ಈ ಭಾಗದಿಂದ ಹೆಚ್ಚಿನ ಜನರು ತೆರಳುತ್ತಿರುವುದರಿಂದ ವಯಾ ಬೆಂಗಳೂರು ವಿಮಾನ ಸಂಚಾರ ಲಾಭದಾಯಕವಾಗಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ನಿರ್ದೇಶಕರಾದ ಮಹೇಶ್ ಚಿಲ್ಕಾ ಅವರ ಜೊತೆ ಸಚಿವೆ ಶೋಭಾ ಕರಂದ್ಲಾಜೆ ಚರ್ಚಿಸಿ ಸಾಧ್ಯತೆಗಳ ಬಗ್ಗೆ ತಿಳಿದುಕೊಂಡರು. ಕೂಡಲೇ ಕೇಂದ್ರ ನಾಗರಿಕ ವಿಮಾನಯಾನ ಖಾತೆಗೆ ಪ್ರಸ್ತಾಪವನ್ನು ಸಲ್ಲಿಸಲು ನಿರ್ದೇಶಕರಿಗೆ ಸೂಚನೆ ನೀಡಿದರಲ್ಲದೆ ಆ ಪ್ರಸ್ತಾಪದ ಪ್ರತಿಯನ್ನು ತಮಗೆ ನೀಡಲು ಹೇಳಿದರು. ಮಹೇಶ್ ಚಿಲ್ಕಾ ಅವರು ಕಲಬುರಗಿ ವಿಮಾನ ನಿಲ್ದಾಣದ ಸೌಲಭ್ಯ ಮತ್ತು ಸಾಧ್ಯತೆಗಳ ಕುರಿತ ಪ್ರಸ್ತಾಪದ ಪತ್ರವನ್ನು ಸಚಿವೆ ಶೋಭಾ ಕರಂದ್ಲಾಜೆಯವರಿಗೆ ನೀಡಿದರು.

ಈಗಾಗಲೇ ಕೇಂದ್ರ ವಿಮಾನಯಾನ ಪ್ರಾಧಿಕಾರವು ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ನ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದ್ದು ಅನುಮತಿ ಕೂಡ ನೀಡಿದೆ. ಇನ್ನು ವಿಮಾನ ಸಂಸ್ಥೆಗಳು ಸಂಚಾರ ಪ್ರಾರಂಭಿಸಲು ಕೇಂದ್ರ ವಿಮಾನಯಾನ ಖಾತೆಯ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಬಾಕಿಯುಳಿದಿದೆ. ಕಲಬುರಗಿ ವಿಮಾನ ನಿಲ್ದಾಣವು ಸದ್ಯ ಆಧುನಿಕವಾಗಿ ಎಲ್ಲ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರುವುದರಿಂದ ಮತ್ತು ನೈಟ್ ಲ್ಯಾಂಡಿಂಗ್ ಸೌಲಭ್ಯವು ಈಗ ಸೇರ್ಪಡೆಗೊಂಡು ಈ ಭಾಗದ ಜನರಿಗೆ ಸೇವೆ ಸಲ್ಲಿಸಲು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿ ನಿಂತಿದೆ ಎಂದು ಮಹೇಶ್ ಚಿಲ್ಕಾ ಸಚಿವರಿಗೆ ವಿವರಿಸಿದರು.


Share with

Leave a Reply

Your email address will not be published. Required fields are marked *