ವಿಶ್ವ ಪ್ರಸಿದ್ಧ ಸರೋವರ ದೇವಸ್ಥಾನ “ಅನಂತಪದ್ಮನಾಭ ಸ್ವಾಮಿಯ ಅನಂತಪುರ”..

Share with

ರ್ತಮಾನ ಕಾಲದಲ್ಲಿ ಕೀರ್ತಿಯ ಶಿಖರವನ್ನೇರಿರುವ ಮಹಾಸನ್ನಿಧಿ ಶ್ರೀ ಅನಂತಪುರ ಕ್ಷೇತ್ರಕ್ಕೆ ವೈಶಿಷ್ಟ್ಯಪೂರ್ಣವಾದ ಶತಮಾನಗಳ ಇತಿಹಾಸವಿದೆ. ಅದ್ಭುತವಾದ ಐತಿಹ್ಯವಿದೆ. ಇಲ್ಲಿನ ಆರಾಧ್ಯಮೂರ್ತಿ ಶ್ರೀ ಅನಂತಪದ್ಮನಾಭ ಸ್ವಾಮಿಯ ಕಾರಣಿಕ ಶಕ್ತಿ ವಿಶ್ವ ಪ್ರಸಿದ್ಧವಾಗಿದೆ.

ಕುಂಬಳೆ ಸೀಮೆಗೆ ಒಳಪಟ್ಟಿರುವ ಮತ್ತು ಕಾಸರಗೋಡು ಜಿಲ್ಲೆಯ ಕುಂಬಳೆ ಪೇಟೆಯಿಂದ ಪೂರ್ವಕ್ಕೆ ಸುಮಾರು ಐದು ಕಿಲೋ ಮೀಟರ್ ದೂರದಲ್ಲಿರುವ ಶ್ರೀ ಅನಂತಪುರ ಕ್ಷೇತ್ರ ನಿರ್ಮಾಣ ವೈವಿಧ್ಯತೆಯಿಂದಲೂ ಪ್ರಕೃತಿ ವಿಶೇಷತೆಗಳಿಂದಲೂ ಆಸ್ತಿಕರನ್ನು ಕೈ ಬೀಸಿ ಕರೆಯುತ್ತಿದೆ. ನಾಸ್ತಿಕರನ್ನೂ ಆಕರ್ಷಿಸುತ್ತಿದೆ. ಪುರಾತನ ಕಾಲದಲ್ಲಿ ಇದು ವೈಭವದಿಂದ ಮೆರೆಯುತ್ತಿತ್ತು ಎಂಬುದಕ್ಕೆ ಪುರಾವೆಗಳು ಈಗಲೂ ನಮ್ಮ ಕಣ್ಣ ಮುಂದಿವೆ. ಚಿಕ್ಕಪುಟ್ಟ ಪರ್ವತಗಳು ತಮ್ಮ ಮಡಿಲಿನಲ್ಲಿ ಜೋಪಾನ ಮಾಡುತ್ತಿರುವಂತೆ ತೋರುತ್ತಿರುವ ಪ್ರದೇಶವಿದು. ನಿಸರ್ಗ ಸೌಂದರ್ಯದ ಜೊತೆಗೆ ಸರೋವರ ಮಧ್ಯದಲ್ಲಿ ಶೋಭಾಯಮಾನವಾಗಿ ಕಂಗೊಳಿಸುತ್ತಿರುವ ಈ ಕ್ಷೇತ್ರ ಸಂದರ್ಶಕರ ಕಣ್ಮನಗಳಿಗೆ ಮುದ ನೀಡುತ್ತದೆ.

ಶ್ರೀ ಅನಂತಪದ್ಮನಾಭನ ದಿವ್ಯ ಸನ್ನಿಧಿಯನ್ನು ಕಾಣುವುದಕ್ಕೆ ಕಾತರರಾಗಿ ಆಗಮಿಸುವ ಭಗವದ್ಭಕ್ತರನ್ನು ನೂರಾರು ಸಂವತ್ಸರಗಳಿಂದ ಚಳಿ, ಮಳೆ, ಬಿಸಿಲುಗಳಿಗೆ ಎದೆಕೊಟ್ಟು ಭದ್ರವಾಗಿ ನಿಂತಿರುವ ಸರ್ಪಕಟ್ಟು ಶೈಲಿಯ ನೀಳವಾದ ಗೋಡೆ ಸ್ವಾಗತಿಸುತ್ತದೆ. ಅದೊಂದು ವಿಶಿಷ್ಟವಾದ ರಚನೆ, ಅಪೂರ್ವವೂ ಹೌದು. ಸರ್ಪಕ್ಕೂ ದಾಟಲು ಅಸಾಧ್ಯವಾದ ರೀತಿಯಲ್ಲಿ ನಿರ್ಮಿತವಾಗಿರುವುದರಿಂದ ಈ ರಚನೆಗೆ ಸರ್ಪಕಟ್ಟು ಎಂಬ ಹೆಸರು ಬಂದಿದೆ. ಇಂತಹ ರಚನೆ ಇರುವ ಕ್ಷೇತ್ರಗಳು ಬಹು ವಿರಳ. ಒಂದಾನೊಂದು ಕಾಲದಲ್ಲಿ ಇದು ಒಂದು ಮಹಾಕ್ಷೇತ್ರವಾಗಿತ್ತೆಂಬುದನ್ನು ಈ ರಚನೆ ಸಾರುತ್ತದೆ ಎಂದು ಕ್ಷೇತ್ರದ ವಾಸ್ತುಶಿಲ್ಪಿಗಳಾದ ವೇಲಪ್ಪರಂಬಿಲ್ ಶ್ರೀ ಪರಮೇಶ್ವರನ್ ನಂಬೂದಿರಿಪ್ಪಾಡ್ ಹೇಳಿದ್ದಾರೆ.

ಸರ್ಪಕಟ್ಟು ಶೈಲಿಯ ಸುದೀರ್ಘವಾದ ಗೋಡೆಯ ನಡುವೆ ಇರುವ ಮಹಾದ್ವಾರದ ಮೂಲಕ ಒಳ ಪ್ರವೇಶಿಸುವವರಿಗೆ ಮಹಾಕ್ಷೇತ್ರಗಳಲ್ಲಿ ಇರುವ ಧ್ವಜಸ್ತಂಭ ಇಲ್ಲಿ ಕಾಣಿಸದಿದ್ದರೂ ತಲೆಯೆತ್ತಿ ನಿಂತಿರುವ ಪ್ರಧಾನ ಬಲಿಕಲ್ಲು ಕಾಣಿಸುತ್ತದೆ. ಯಾವುದೇ ಅಮೆ ಸೂತಕಾದಿಗಳು ಇದ್ದವರು ಈ ಬಲಿಕಲ್ಲನ್ನು ದಾಟಿ ಮುಂದುವರಿಯಬಾರದು, ಸ್ಪರ್ಶಿಸಲೂ ಕೂಡದು. ಬಲಿಕಲ್ಲಿನ ಬಳಿ ಅನಗತ್ಯ ಮಾತುಕತೆ ನಡೆಸುವುದೂ ಹಿತವಲ್ಲ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಒಳಾಂಗಣ, ಒಳಗಿನ ಗೋಪುರ ಇದ್ದರೆ ಇಲ್ಲಿ ಅದಕ್ಕಿಂತ ಭಿನ್ನವಾಗಿ ವಿಶಾಲವಾದ ಸ್ಥಳದಲ್ಲಿ ಹರಡಿಕೊಂಡಿರುವ ವ್ಯವಸ್ಥೆಗಳು ಕಾಣಿಸುತ್ತವೆ. ಬಲಿಕಲ್ಲಿನಿಂದ ಮುಂದಕ್ಕೆ ನೋಡಿದರೆ ಇಳಿದು ಸಾಗುವುದಕ್ಕೆ ಸೋಪಾನಗಳು ಕಾಣಿಸುತ್ತವೆ. ಕೆಳಗಿಳಿದು ಬರುವ ಭಕ್ತರು ಮೂಡುಗೋಪುರದ ಬಳಿಗೆ ತಲುಪುತ್ತಾರೆ. ಅಲ್ಲಿಂದ ಮುಂದೆ ದಿವ್ಯ ದರ್ಶನವೇ ಸರಿ! ಜಲರಾಶಿಯ ಮಧ್ಯದಲ್ಲಿ ವಿರಾಜಮಾನನಾದ ಸಾಕ್ಷಾತ್ ಶ್ರೀಮನ್ನಾರಾಯಣನ ವೈಕುಂಠ ದರ್ಶನವೆಂದರೆ ಅತಿಶಯೋಕ್ತಿಯಾಗಲಾರದು.

ಗೋಪುರದ ಬಳಿಯಿಂದ ಮತ್ತೆ ಇಳಿದು ಮುಂದೆ ಸಾಗಿದರೆ ನಮಸ್ಕಾರ ಮಂಟಪ ಸಿಗುತ್ತದೆ. ನಮಸ್ಕಾರ ಮಂಟಪದ ಛಾವಣಿಯಲ್ಲಿ ಮಹಾನ್ ಸಾಧುಸಂತರ ಮತ್ತು ಋಷಿಮುನಿಗಳ ತೈಲವರ್ಣದ ಚಿತ್ರಗಳಿವೆ. ಆ ಚಿತ್ರಗಳ ಚೌಕಟ್ಟುಗಳು ವಿಶೇಷವಾದ ಕಲಾಕೃತಿಗಳಿಂದ ಕೂಡಿಕೊಂಡು ಆಕರ್ಷಣೀಯವಾಗಿವೆ. ರಾಮಾಯಣ, ಮಹಾಭಾರತ ಹಾಗೂ ಶ್ರೀ ಕ್ಷೇತ್ರದ ಇತಿಹಾಸಕ್ಕೆ ಸಂಬಂಧಪಟ್ಟ ಉಪಸಾನಿಧ್ಯಗಳ ಘಟನೆಗಳನ್ನೊಳಗೊಂಡ ಮರದ ಕೆತ್ತನೆ ಕೆಲಸಗಳು ದಾರು ಶಿಲ್ಪ ಚಾತುರ್ಯಕ್ಕೆ ಹಿಡಿದ ಕನ್ನಡಿಯಾಗಿವೆ.

ನಮಸ್ಕಾರ ಮಂಟಪದ ಬದಿಯಿಂದಾಗಿ ಮುಂದಕ್ಕೆ ಸಾಗಿದಾಗ ಧನ್ಯತೆಯ ಮುಹೂರ್ತ ಪ್ರತಿಯೋರ್ವ ಭಗವದ್ಭಕ್ತನಿಗೂ ಲಭ್ಯವಾಗುವುದರಲ್ಲಿ ಸಂಶಯವಿಲ್ಲ. ಅಭೂತಪೂರ್ವವಾದ ಶಿಲ್ಪಕಲಾ ವೈಭವದೊಂದಿಗೆ ಪಾವನವಾದ, ಪುಣ್ಯಪ್ರದವಾದ ಶ್ರೀ ಅನಂತಪದ್ಮನಾಭ ಸ್ವಾಮಿಯ ದಿವ್ಯದರ್ಶನ ಪ್ರಾಪ್ತವಾಗುತ್ತದೆ. ಶ್ರೀಮನ್ನಾರಾಯಣನು ಶ್ರೀ ಅನಂತಪದ್ಮನಾಭನಾಗಿ ಇಕ್ಕಡೆಗಳಲ್ಲಿ ಶ್ರೀದೇವಿ, ಭೂದೇವಿ, ಗರುಡ, ಹನುಮಂತ ಹಾಗೂ ನಾಗಕನ್ನಿಕೆಯರನ್ನೊಡಗೂಡಿಕೊಂಡು ಐದು ಹೆಡೆಯ ಸರ್ಪದ ಮೇಲೆ ಆಸೀನನಾಗಿರುವ ವಿಶೇಷ ಭಂಗಿಯ ಪ್ರತಿಷ್ಠೆ ಭಕ್ತರನ್ನು ಪಾರಮಾರ್ಥಿಕದ ಉತ್ತುಂಗಕ್ಕೆ ಕೊಂಡೊಯ್ಯುವ ನಿಮಿಷವಾಗಿದೆ. ಆತ್ಮಸಾಕ್ಷಾತ್ಕಾರದ ಅನಿರ್ವಚನೀಯ ನಿಮಿಷ, ದೈವೀಕ ಅನುಭವದ ಪರಾಕಾಷ್ಠೆ.

ಹಿನ್ನೆಲೆ:

ಯತಿವರೇಣ್ಯರಾದ ಬಿಲ್ವಮಂಗಲ ಸ್ವಾಮಿಗಳಿಗೂ ಶ್ರೀ ಅನಂತಪದ್ಮನಾಭನ ದಿವ್ಯ ಸನ್ನಿಧಿಗೂ ನಿಕಟ ಸಂಬಂಧವಿದೆಯೆಂದು ಐತಿಹ್ಯ ತಿಳಿಸುತ್ತದೆ. ಶ್ರೀಹರಿಯ ಪರಮ ಭಕ್ತರಾಗಿದ್ದ ಬಿಲ್ವಮಂಗಲ ಸ್ವಾಮಿಗಳು ಶ್ರೀ ಕ್ಷೇತ್ರದಲ್ಲಿ ಪೂಜಾದಿ ಕರ್ಮಗಳನ್ನು ನಿಷ್ಠೆಯಿಂದ ಮಾಡುತ್ತಾ ಇಲ್ಲಿಯೇ ವಾಸವಾಗಿದ್ದರಂತೆ. ಎಂದಿನಂತೆ ತಮ್ಮ ನಿತ್ಯ ನೈಮಿತ್ತಿಕಗಳ ಜೊತೆ ಅರ್ಚನೆಯೇ ಮೊದಲಾದ ಕೆಲಸಗಳಲ್ಲಿ ಲೀನರಾದ ಅವರು ಪಕ್ಕನೆ ಬಾಲಕನೊಬ್ಬನು ತಮ್ಮ ಜೊತೆಗಿರುವುದನ್ನು ಗಮನಿಸಿದರು. ಅದನ್ನು ವಿಶೇಷವಾಗಿ ಪರಿಗಣಿಸದೆ ತಮ್ಮ ಕಾರ್ಯದಲ್ಲಿ ತಲ್ಲೀನರಾದ ಮುನಿಗಳು ಬಾಲಕನ ಚೇಷ್ಟೆ ಹೆಚ್ಚಾದಾಗ ಕುಪಿತಗೊಂಡು ತಮ್ಮ ಎಡ ಕೈಯಿಂದ ಅವನನ್ನು ದೂಡಿಬಿಟ್ಟರು. ತತ್‌ಕ್ಷಣವೇ ಆ ಬಾಲಕನು ಶ್ರೀಕ್ಷೇತ್ರವನ್ನು ಆವರಿಸಿರುವ ಸರೋವರದ ಈಶಾನ್ಯ ಭಾಗದ ದಡಕ್ಕೆ ಹೋಗಿ ಬಿದ್ದನೆಂದೂ ಅದೇ ಸ್ಥಳದಲ್ಲಿ ಒಂದು ಗುಹೆ ನಿರ್ಮಾಣವಾಯಿತಲ್ಲದೆ ಆ ಬಾಲಕನು ಮಾಯವಾಗಿ ಅಲ್ಲಿ ಕೇವಲ ಓಂಕಾರ ಸಹಿತವಾದ ಒಂದು ಜ್ಯೋತಿ ಕಾಣಿಸಿಕೊಂಡಿತೆಂಬುದು ಇಲ್ಲಿನ ಚರಿತ್ರೆಯಾಗಿದೆ. ತಮ್ಮ ದಿವ್ಯಜ್ಞಾನದ ಮೂಲಕ ಬಿಲ್ವಮಂಗಲ ಸ್ವಾಮಿಗಳಿಗೆ ಆದ ಅನಾಹುತ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ದೈವೀಕ ಶಕ್ತಿಯೇ ಬಾಲಕನ ರೂಪದಲ್ಲಿ ಕಾಣಿಸಿಕೊಂಡವೆಂದು ತಿಳಿದುಕೊಂಡ ಯತಿಗಳು ತಡ ಮಾಡದೆ ಗುಹಾ ಮಾರ್ಗವಾಗಿ ತಾವೂ ಮುಂದುವರಿದು ಬಾಲಕನನ್ನು ಅರಸುತ್ತಾ ನಡೆದೇಬಿಟ್ಟರು. ಓಂಕಾರ ಮುಂದೆ ಸಾಗಿದಂತೆ ಸ್ವಾಮಿಗಳು ಅದನ್ನು ಹಿಂಬಾಲಿಸುತ್ತಾ ಸಾಗಿದರು.

ಪಶ್ಚಿಮಾಭಿಮುಖವಾಗಿ ಮುಂದುವರಿದ ಪಯಣ ಕಡಲತಡಿಗೆ ತಲುಪಿತು. ಹೊರಪ್ರಪಂಚಕ್ಕೆ ಬಂದ ಸ್ವಾಮಿಗಳು ಆ ಪರಮ ಶಕ್ತಿಯ ದರ್ಶನವೆಂಬಂತೆ ಈಗಿನ ಮೊಗ್ರಾಲ್‌ನ ಸಮೀಪದ ಕಡಲ ಕಿನಾರೆಯಲ್ಲಿರುವ ನಾಂಗುಯಿ ಎಂಬಲ್ಲಿ ಮುರಕಲ್ಲಿನಿಂದ ನಿರ್ಮಿತವಾದ ಎರಡು ಪಾದಗಳನ್ನು ಕಂಡರು. ಅದಕ್ಕೆ ವಿಧಿವತ್ತಾಗಿ ಪೂಜೆಯನ್ನು ಸಲ್ಲಿಸಿದ ಸ್ವಾಮಿಗಳು ಅಲ್ಲಿಂದ ದಕ್ಷಿಣಾಭಿಮುಖವಾಗಿ ಪ್ರಯಾಣವನ್ನು ಮುಂದುವರಿಸಿದರು. ದಿನಗಳೆಷ್ಟೋ ಕಳೆದುಹೋದುವು. ಪ್ರಯಾಣ ನಿರಂತರ ಸಾಗಿ ಅನಂತನ್‌ಕಾಡ್‌ ಎಂಬಲ್ಲಿಗೆ ಯತಿಗಳು ತಲುಪಿದರು. ಅವರ ಅಚಲ ಭಕ್ತಿ ಮತ್ತು ಪರಮಾತ್ಮನ ದರ್ಶನ ಪಡೆಯುತ್ತೇನೆಂಬ ವಿಶ್ವಾಸ ಹಾಗೂ ಪ್ರಯತ್ನಗಳಿಗೆ ಒಲಿದ ಶ್ರೀದೇವರು ಅಲ್ಲಿ ಕಾಣಿಸಿಕೊಂಡರಂತೆ. ಆ ಸ್ಥಳವೇ ಈಗ ತಿರುವನಂತಪುರ ಆಗಿದೆ. ನೀನು ನಿಜವಾಗಿಯೂ ನನ್ನ ಪರಮ ಭಕ್ತ, ಅನಂತಪುರದಲ್ಲಿ ನಡೆದುದು ಅಘಟಿತ ಘಟನೆಯೆಂದು ತಿಳಿ, ಅದು ಕಾಲದ ಮಹಿಮೆ, ನೀನು ಇನ್ನು ಇಲ್ಲಿಂದ ಮತ್ತೆ ಅನಂತಪುರಕ್ಕೆ ಹಿಂದಿರಾಗಬೇಕು ಎಂಬ ಶ್ರೀದೇವರ ವಚನವನ್ನು ಶಿರಸಾ ಪಾಲಿಸಿದ ಸ್ವಾಮಿಗಳು ಅಲ್ಲೇ ಇದ್ದ ಮಾವಿನ ಮರದಿಂದ ಮಾವಿನ ಕಾಯಿಯನ್ನು ಕೊಯ್ದು ಗೆರಟೆಯಲ್ಲಿಟ್ಟು ತಮ್ಮ ಇಷ್ಟ ದೇವರಿಗೆ ನೈವೇದ್ಯ ಮಾಡಿದರಂತೆ. ಈಗಲೂ ಪ್ರತಿದಿನ ತಿರುವನಂತಪುರ ಶ್ರೀ ಪದ್ಮನಾಭ ಸ್ವಾಮಿಗೆ ಮಾವಿನ ಕಾಯಿ- ಶೈವೇದ್ಯ ನಡೆಯುತ್ತದೆ ಎಂಬುದು ಉಲ್ಲೇಖನೀಯ. ದೇವರ ಅಣತಿಯನ್ನು ಪಾಲಿಸುವುದಕ್ಕಾಗಿ ಬಿಟ್ಟಮಂಗಲ ಸ್ವಾಮಿಗಳು ಮತ್ತೆ ಅನಂತಪುರಕ್ಕೆ ಆಗಮಿಸಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಬಹುಕಾಲ ಬದುಕಿದ್ದರಂತೆ.

ಅಪೂರ್ವ ಪದ್ಧತಿಯ ಬಂಬ ರಚನೆ – ಕಡುಶರ್ಕರಪಾಕ

ಶಿಲ್ಪಿಗಳು ಹೇಳುವಂತೆ ಬಿಂಬ ರಚನೆಗೆ ಸಂಬಂಧಿಸಿ ಪ್ರಧಾನವಾದ ಎಂಟು ಪದ್ಧತಿಗಳಲ್ಲೊಂದಾದ ಕಡುಶರ್ಕರ ವಿಭಾಗಕ್ಕೆ ಸೇರುವ ವಿಶಿಷ್ಟವಾದ ರೀತಿಯಲ್ಲಿ ಗರ್ಭಗುಡಿಯಲ್ಲಿಯೇ ರಚನೆ ಮಾಡುವ ವಿಧಾನವೇ ಇಲ್ಲಿನ ವಿಶೇಷ. ನಿರ್ಮಾಣದಲ್ಲಿ ಬಹಳ ಕ್ಲಿಷ್ಟಕರವಾದುದಾದರೂ ಕಾಠಿಣ್ಯದಿಂದ ಕೂಡಿದ್ದು, ಇದರ ಪ್ರಧಾನ ಕಚ್ಚಾ
ವಸ್ತುಗಳೆಂದರೆ 11 ವಿಧದ ಆಯುರ್ವೇದ ಔಷಧಿಗಳು. ಆದರೆ ಕಡುಶರ್ಕರ ಪಾಕ ಸಿದ್ಧವಾಗಬೇಕಾದರೆ 108 ವಿಧದ ವಸ್ತುಗಳ ಅಗತ್ಯವಿದೆ, ಅವುಗಳನ್ನು ಸಸ್ಯಜನ್ಯ, ಪ್ರಾಣಿಜನ್ಯ ಮತ್ತು ಪ್ರಕೃತಿದತ್ತ ಎಂದು ವಿಭಾಗ ಮಾಡಬಹುದು.

ಬಿಂಬ ರಚನೆಯಲ್ಲಿ ಪ್ರಧಾನವಾದ ಒಂದು ವಿಧಿ ಎಂದರೆ ಶೂಲ ಪ್ರತಿಷ್ಠೆ. ವಿಗ್ರಹ ರಚನೆಗಾಗಿ ಶ್ರೀ ದೇವರ ಸಾನ್ನಿಧ್ಯವಿರುವ ಸ್ಥಳದಲ್ಲಿ ಕದಿರ ಮರ ಎಂದು ಕರೆಯಲ್ಪಡುವ ಕಾಚಿ ಮರದಿಂದ ತಯಾರಿಸಿದ ಅಸ್ಥಿಪಂಜರವನ್ನು ಪೀಠದಲ್ಲಿ ಅಳವಡಿಸುವ ಕ್ರಿಯೆಗೆ ಶೂಲಪ್ರತಿಷ್ಟೆ ಎಂದು ಹೆಸರು. ಅನಂತರ ಬಿಂಬ ರಚನೆಯ ಕೆಲಸ ಆರಂಭವಾಗುತ್ತದೆ. ತಯಾರಿಸಿದ ಜಾಕವನ್ನು ಆ ಶೂಲಕ್ಕೆ ಹಚ್ಚುತ್ತಾ ವರ್ಷಗಟ್ಟಲೆ ಕಾರ್ಯವೆಸಗಿದ ಶಿಲ್ಪಿಗಳು ಆ ಕೆಲಸವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇಂತಹ ಅತ್ಯಪೂರ್ವವಾದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುವಲ್ಲಿ ನೇತೃತ್ವ ವಹಿಸಿದ ಶಿಲ್ಪಿಗಳಾದ ಕೋಟಿಯಂ ಸಮೀಪದ ಬ್ರಹ್ಮಮಂಗಲಂ ನಿವಾಸಿಗಳಾದ ಶಿಲ್ಪಿ ದಿ. ಶ್ರೀ ಸುಬ್ರಹ್ಮಣ್ಯ ಆಚಾರಿ ಮತ್ತು ಅವರ ಪುತ್ರ ಶ್ರೀ ಕೈಲಾಸ್
ನಿಜಕ್ಕೂ ಅಭಿನಂದನಾರ್ಹರು. ಬಿಂಬ ರಚನೆಯ ಕೆಲಸ ಪೂರ್ಣವಾದ ಕೂಡಲೇ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ಸಾನ್ನಿಧ್ಯ ಪ್ರತಿಷ್ಠೆ, ಬ್ರಹ್ಮಕಲಶ ಮೊದಲಾದುವು ಶ್ರೀದೇವರ ಕೃಪೆಯಿಂದಲಾಗಿ 2008ರಲ್ಲಿ ಸಾಂಗವಾಗಿಯೂ ವಿಜೃಂಭಣೆಯಿಂದಲೂ ನಡೆದಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ಮಾಡಿರುವುದು ಈ ನಾಡಿನ ಜನತೆಯ ಭಾಗ್ಯವೇ ಸರಿ ಎಂಬುದು ಆಸ್ತಿಕ ಬಂಧುಗಳ ಅಭಿಪ್ರಾಯವಾಗಿದೆ.

ಆಸ್ತಿಕರನ್ನು ಆಕರ್ಷಿಸುತ್ತಿದ್ದ ದೇವರ ಮೊಸಳೆ:

ಸರೋವರ ಕ್ಷೇತ್ರವೆಂದೇ ಖ್ಯಾತಿವೆತ್ತ ಶ್ರೀ ಅನಂತಪುರ ದೇವಸ್ಥಾನ ವಿಶಾಲವಾದ ಕೆರೆಯ ಮಧ್ಯದಲ್ಲಿ ನೆಲೆಗೊಂಡಿದೆ. ಶುಭ್ರವಾಗಿ ಕಂಗೊಳಿಸುವ ಈ ಸರೋವರದ ನೀರಿಗೆ ಔಷಧಗುಣ ಇರುವುದೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಸರೋವರದಲ್ಲಿ ವಾಸವಾಗಿದ್ದ ಮೊಸಳೆ ಇಲ್ಲಿಯ ವಿಶೇಷತೆಯಾಗಿತ್ತು.

ಬಬಿಯಾ ಎಂದು ಕರೆಯಲಾಗುತ್ತಿದ್ದ ಮೊಸಳೆ ಭಗವದ್ಭಕ್ತರಿಗೆ ಕ್ಷೇತ್ರದ ಅರ್ಚಕರೇ ಮೊದಲಾದವರಿಗೆ ಆಗಾಗ ಕಾಣಿಸುತ್ತಿತ್ತು. ಹಿಂದೆ ಇದ್ದ ಮೊಸಳೆಯನ್ನು 1945ರಲ್ಲಿ ಬ್ರಿಟಿಷ್ ಸೈನಿಕನೊಬ್ಬನು ಗುಂಡಿಕ್ಕಿ ಕೊಂದನೆಂದೂ ಕೆಲವೇ ದಿನ ಕಳೆದಾಗ ಇತ್ತೀಚೆಗಿನವರೆಗೂ ಜೀವಂತ ಇದ್ದ ಮೊಸಳೆ ಕಾಣಿಸಿಕೊಂಡಿತ್ತೆಂದೂ ಸಮೀಪವಾಸಿಗಳಾದ ಎಂಬತ್ತು ವರ್ಷ ಪ್ರಾಯದ ಹಿರಿಯರೊಬ್ಬರ ಅಭಿಪ್ರಾಯವಾಗಿದೆ. ಸುಮಾರು ಎಂಟು ಅಡಿ ಉದ್ದವಿದ್ದ ಬಬಿಯಾ ಹೆಣ್ಣೋ ಗಂಡೋ ಎಂಬುದನ್ನು ಕೂಡ ತಿಳಿದವರಿಲ್ಲ. ಅದಂತೂ ನಿರುಪದ್ರವಿಯಾಗಿತ್ತು.

ಉಪ ಸಾನ್ನಿಧ್ಯಗಳು

ಶ್ರೀ ಮಹಾಗಣಪತಿ, ಗೋಶಾಲೆ ಶ್ರೀಕೃಷ್ಣ, ಶ್ರೀವೇದಾವತಿ, ಶ್ರೀ ವನಶಾಸ್ತಾರ, ಶ್ರೀ ರಕ್ತಶ್ವರಿ, ಶ್ರೀ ಮಹಿಷಮರ್ದಿನಿ, ಉಳ್ಳಾಕುಳು, ಬೊಬ್ಬರ್ಯ, ವೇಟ್ಟಿಕೊರುಮಗನ್, ಇಲ್ಲಿನ ಉಪಸಾನ್ನಿಧ್ಯಗಳಾಗಿವೆ.


Share with

Leave a Reply

Your email address will not be published. Required fields are marked *